ದುರಂತ ಕಾವ್ಯ ~ ಬದುಕಿನ ಕೊನೆಯ ಕಂತು

ಚಿನ್ನದ ಚಮಚೆಯನ್ನ ಬಾಯಲಿಟ್ಟುಕೊಂಡೇ ಹುಟ್ಟಿದ ರಘುವೀರ್, ಸಾಯುವ ವೇಳೆಗೆ ಹನಿ ನೀರು ಕುಡಿಸುವವರಿಗಾಗಿ ಒದ್ದಾಡಿಬಿಟ್ಟರು. ಏರಿಳಿತದ ಚಕ್ರವನ್ನು ನಿರಂತರ ತಳ್ಳುತ್ತ ಇರಬೇಕು. ಇಲ್ಲವಾದರೆ ಒಮ್ಮೆ ಕೆಳಗೆ ಇಳಿದಿದ್ದು ಮತ್ತೆಂದೂ ಮೇಲಕ್ಕೇರದೆ ಹೋಗಬಹುದು. ಈ ಎಚ್ಚರದ ಪಾಠವನ್ನು ರಘುವೀರರ ಕೊನೆಯ ದಿನಗಳು ನಮಗೆ ಕಲಿಸುತ್ತವೆ. ರಘುವೀರ್ ಬದುಕಿನ ಕೊನೆಯ ದಿನಗಳು ಅದೆಷ್ಟು ದುರ್ಭರವಾಗಿದ್ದವು ಅನ್ನುವುದನ್ನು  ’ದುರಂತ ಕಾವ್ಯ’ದ ಕೊನೆಯ ಕಂತು ನಿಮ್ಮೆದುರು ಇಡುತ್ತಿದೆ..

ಎರಡು ಜೊತೆ ಬಟ್ಟೆ ಇಟ್ಟುಕೊಂಡು, ಹೆಚ್ಚೆಂದರೆ ಒಂದು ಲೆದರ್ ಶೂ ಹಾಕಿಕೊಂಡು ಗಾಂಧಿನಗರ ಎಡತಾಕುತ್ತ, ಒಂದೊಂದೆ ಮೆಟ್ಟಿಲೇರುತ್ತ ಗೆದ್ದ ನಟರ ಕಥೆ ನಮ್ಮಲ್ಲಿ ಸಾಕಷ್ಟಿದೆ. ಅಂಥ ಕೆಲವರು ಬದುಕನ್ನೂ ಕಟ್ಟಿಕೊಂಡಿದ್ದಾರೆ. ನಾಯಕ ನಟರಾಗಿ ಗೆದ್ದವರು ಮಾತ್ರವಲ್ಲ, ಸಿನೆಮಾ ರಂಗದ ವಿವಿಧ ಭಾಗಗಳಲ್ಲಿ ಹೀಗೆ ದುಡಿದು ಸಾಧಿಸಿ ತೋರಿಸಿದವರೂ ನಮ್ಮ ನಡುವೆ ಇದ್ದಾರೆ. ಬಹುಶಃ ಬದುಕಿನ ಒಂದು ತುದಿ ಕಂಡವರು ಮತ್ತೊಂದು ತುದಿಯನ್ನೂ ಕಾಣಲೇಬೇಕು ಅನ್ನೋದು ಸಿನೆಮಾ ರಂಗದ ಅಲಿಖಿತ ನಿಯಮವೇನೋ! ಅಥವಾ ಬದುಕಿನ ಚಕ್ರ ಸುತ್ತುತ್ತ ಇರುತ್ತದೆ ಅನ್ನುವುದನ್ನ ಸಾಬೀತು ಪಡಿಸಲಿಕ್ಕೇ ಇರಬಹುದು, ಇಂದು ರಘುವೀರ್ ಒಂದು ಕೆಟ್ಟ ನಿದರ್ಶನವಾಗಿ ನಮ್ಮ ನಡುವೆ ಉಳಿದುಹೋಗಿದ್ದಾರೆ.

ಆಪತ್ತಿನಲ್ಲಿ ಆಪದ್ಬಾಂಧವ
ಅಜೇಯ್ ವಿಜಯ್ ಸಿನೆಮಾಕ್ಕೆ ಸರ್ಪ್ರೈಸಿಂಗ್ ಆಗಿ ಬಣ್ಣ ಹಚ್ಚಿಕೊಂಡಿದ್ದರು ರಘುವೀರ್. ವಾಸ್ತವದಲ್ಲಿ ಈ ಸರ್ಪ್ರೈಸ್ ಅವರ ಸುತ್ತಲಿನವರಿಗಷ್ಟೇ. ಈ ಕನಸನ್ನು ನನಸು ಮಾಡಿಕೊಳ್ಳಲಿಕ್ಕೆ ವರ್ಷದಿಂದ ತಾಲೀಮು ನಡೆಸಿದ್ದರು ರಘು. ಮಗ ಸಹ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರೂ ರಘು ತಂದೆ ನೂರಾರು ಕಾಸ್ಟ್ಯೂಮ್‌ಗಳನ್ನು ತಂದು ಮಗನೆದುರು ಗುಡ್ಡೆ ಹಾಕಿದ್ದರು. ಅದೇನು ಕೀಳರಿಮೆಯಿತ್ತೋ, ಮೊದಲ ಸಿನೆಮಾಕ್ಕೆ ರಘುವೀರ್ ಅನ್ನು ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿಸಲು ಹಿಂಜರಿದಿದ್ದರು. ಮುರಳಿ ಆ ಸಿನೆಮಾಕ್ಕೆ ನಾಯಕರಾಗಿದ್ದು, ರಘುವೀರ್‌ದು ಪೋಷಕ ಪಾತ್ರ.
ಮೊದಲ ಸಿನೆಮಾ ಸೊತರೂ ತಾನೂ ನಟಿಸಬಲ್ಲೆ ಎನ್ನುವ ಆತ್ಮ ವಿಶ್ವಾಸ ರಘುವೀರ್‌ರಲ್ಲಿ ಮೂಡಿತ್ತು. ಅವರ ಸ್ವಭಾವವೇ ಹಾಗಿತ್ತು. ಶುರುವಿನ ದಿನಗಳಲ್ಲಿ ಅವರು ಆತ್ಮವಿಶ್ವಾಸದ ಪ್ರತೀಕವಾಗಿದ್ದರು. ಗೆಳೆಯರ ಪಾಲಿಗೆ ಆಪದ್ಬಂಧುವಾಗಿದ್ದರು. ಕುಲಬಾಂಧವರನ್ನು ಮೇಲಕ್ಕೆತ್ತುವ ಪ್ರಯತ್ನವನ್ನೂ ಸಾಕಷ್ಟು ಮಾಡಿದ್ದರು. ತಮ್ಮ ಬಾಲ್ಯದ ಗೆಳೆಯ ಶೋಭರಾಜ್‌ರನ್ನು ತಮ್ಮ ಬಹುತೇಕ ಸಿನೆಮಾಗಳಲ್ಲಿ ನಟಿಸುವಂತೆ ಮಾಡಿದ್ದು ಸ್ವತಃ ರಘುವೇ. ಚೈತ್ರದ ಪ್ರೇಮಾಂಜಲಿ ಸಿತ್ರದ ಖಳ ಪಾತ್ರ ಶೋಭರಾಜ್‌ಗೆ ಹೆಸರನ್ನೂ ಅವಕಾಶವನ್ನೂ ತಂದುಕೊಟ್ಟಿತ್ತು. ಅದಕ್ಕೆ ಮೊದಲು ಶೋಭರಾಜ್ ಜೇಲರ್ ಜಗನ್ನಾಥ್ ಎಂಬ ಸಿನೆಮಾಕ್ಕೆ ಬಣ ಹಚ್ಚಿದ್ದರೂ ಅದು ಬಿಡುಗಡೆಯಾಗಿರಲಿಲ್ಲವಾಗಿ, ’… ಪ್ರೇಮಾಂಜಲಿ’ಯ ಮೂಲಕ ಅವರು ಖಾತೆ ತೆರೆಯುವಂತಾಯ್ತು. ಈ ಪಾತ್ರಕ್ಕೆ ನಿರ್ದೇಶಕ ಎಸ್.ನಾರಾಯಣ್ ಬೇರೊಬ್ಬರನ್ನು ಆಯ್ಕೆ ಮಾಡಿದ್ದರಂತೆ. ಕೊನೆಗೆ ರಘುವಿನ ಒತ್ತಾಸೆಯ ಮೇರೆಗೆ ಗೆಳೆಯ ಶೋಭರಾಜ್‌ಗೆ ಅವಕಾಶ ಲಭಿಸಿತ್ತು. ಮುಂದೆ ರಘುವೀರ್ – ನಾರಾಯಣ್ ಕಿತ್ತಾಡಿಕೊಂಡು ದೂರವಾದರೂ ಶೋಭರಾಜ್ ನಾರಾಯಣ್ ಜೊತೆಗಿನ ಸ್ನೇಹವನ್ನು ಉಳಿಸಕೊಂಡಿದ್ದರು ಮತ್ತು ಅವರೊಂದಿಗೆ ಸಾಕಷ್ಟು ಸಿನೆಮಾಗಳಲ್ಲೂ ನಟಿಸಿದರು. ತನಗೆ ಅವಕಾಶ ಕೊಡಿಸಿದ ಸ್ನೇಹಿತನ ಶತ್ರುವನ್ನು ಓಲೈಸುವಷ್ಟು ಅವಕಾಶವಾದಿಯಲ್ಲ ಶೋಭರಾಜ್. ಅಂದಮೇಲೆ, ಇಲ್ಲಿ ರಘುವಿನದ್ದೇ ದೋಷವಿತ್ತು ಅನ್ನುವುದು ಸ್ಪಷ್ಟವಾಗುತ್ತದೆ. ಮುಂದೆ ರಘುವೀರ್ ಇಂತಹ ಅನೇಕ ಅವಘಡಗಳನ್ನು ಮಾಡಿಕೊಳ್ಳುತ್ತಲೇ ಹೋದರು.

ಕಥೆಯೇ ಬದುಕಾದಾಗ..
ಎಂಥ ವಿಚಿತ್ರ ನೋಡಿ.. ಒಂದೆಡೆ ರಘುವೀರ್ ತಂದೆಯ ದುಡ್ಡಿನ ಮರದ ನೆರಳಲ್ಲಿ ಗೌರವಾದರದ ಸುಖವನ್ನು ಅನುಭವಿಸುತ್ತಲೇ ಸಿನೆಮಾಗಳಲ್ಲಿ ತಂದೆಯ ವಿರುದ್ಧ ತಿರುಗಿ ಬೀಳುವಂಥ ಪಾತ್ರಗಳನ್ನು ಮಾಡುತ್ತಿದ್ದರು. ಈ ಬಗ್ಗೆ ಮಾಂಬಳ್ಳಿ ಪಾಪಯ್ಯನವರು ತಂದೆ ವಿರುದ್ಧ ಬಂಡೇಳುವ ಪಾತ್ರಗಳನ್ನೆ ಮಾಡುತ್ತ ನನ್ನ ವಿರುದ್ಧವೂ ಇವನು ತಿರುಗಿ ಬೀಳಬಹುದು ಅಂದಿದ್ದರಂತೆ. ಅದಕ್ಕೆ ರಘು ನಗುತ್ತಾ, ಇದು ಸಿನೆಮಾ, ಜೀವನ ಅಲ್ಲ! ಎಂದು ಉತ್ತರಿಸಿದ್ದರಂತೆ. ಆದರೆ ರಘು ಪಾಲಿಗೆ ಸಿನೆಮಾ ಕಥೆಯೇ ಜೀವನವಾಗಲಿಕ್ಕೆ ಹೆಚ್ಚು ಕಾಲ ಬೇಕಾಗಲಿಲ್ಲ. ಶೃಂಗಾರ ಕಾವ್ಯ ಅವರ ಜೀವನದ ದುರಂತ ಕಾವ್ಯಕ್ಕೆ ಮುನ್ನುಡಿ ಬರೆದಿತ್ತು. ಶುಟಿಂಗ್ ಸೆಟ್‌ನಲ್ಲಿ ಮಗ ಸಹನಟಿಯ ಜೊತೆ ಪ್ರಣಯದಾಟ ನಡೆಸುತ್ತಿರುವ ಸುದ್ದಿ ತಿಳಿಯುತ್ತಲೇ ತಂದೆ ಕೆಂಡಾಮಂಡಲವಾದರು. ರಘು ಮೊದಲ ಬಾರಿಗೆ ತಿರುಗಿ ಬಿದ್ದಿದ್ದು ಆವಾಗಲೇ. ಮುಂದೆ ಈ ಬಂಡಾಯ ತಂದೆಯ ಮಾತನ್ನೂ ಲೆಕ್ಕಿಸದೆ ಸಹನಟಿ ಸಿಂಧೂವನ್ನು ಮದುವೆಯಾಗುವವರೆಗೂ ಮುಂದುವರೆಯಿತು.
ಆಸ್ತಿಯನ್ನೂ ಮಮತೆ – ವಾತ್ಸಲ್ಯಗಳನ್ನೂ ತಿರಸ್ಕರಿಸಿ ಮನೆಬಿಟ್ಟು ಹೋಗಿ ಮದುವೆಯಾಗುವ ಸಿನಿಮೀಯ ಪ್ರೇಮಕಥೆಯನ್ನೆ ಬದುಕಿಗೂ ಅಳವಡಿಸಿಕೊಂಡ ರಘುವೀರ್, ಅಲ್ಲಿಯೇ ಹಲ್ಲುಕಚ್ಚಿಕೊಂಡು ಉಳಿದಿದ್ದರೆ ಎಲ್ಲವೂ ಸರಿಯಿರುತ್ತಿತ್ತೋ ಏನೋ. ಆದರೆ ಶುರುವಲ್ಲೇ ಮದುವೆಯೊಡನೆ ’ಶುಭಂ’ ಆದ ಬಹುತೇಕ ಸಿನೆಮಾಗಳು ಕೊನೆಗೊಳ್ಳುವುದು ದುರಂತದಲ್ಲಿಯೇ. ರಘು ಬದುಕಿನಲ್ಲೂ ಹಾಗೆಯೇ ಆಯಿತು. ಶುಭಂ ನಂತರ ಬವಣೆಗಳು ಶುರುವಾದವು. ಸಾಲು ಸಾಲು ಸಿನೆಮಾಗಳ ಸೋಲು, ತಂದೆಯ ರಕ್ಷೆಯಿಂದ ಹೊರಬಂದೊಡನೆಯೇ ದೂರವಾಗತೊಡಗಿದ ಸಾಮಾಜಿಕ ಗೌರವ, ಇದ್ದಕ್ಕಿದ್ದ ಹಾಗೆ ಕಳೆದುಕೊಂಡ ಐಷಾರಾಮಿ ಬದುಕು – ಈ ಎಲ್ಲದರಿಂದ ರಘು ಕುಗ್ಗಿಹೋದರು. ದುಡಿಯಲು ಹೋಗುತ್ತಿದ್ದ ಹೆಂಡತಿಯನ್ನ ಸಹಿಸಿಕೊಂಡು ಇರಲಾರದೆ ಆಕೆಯನ್ನೂ ಮಗಳನ್ನೂ ಚೆನ್ನೈನಲ್ಲೇ ಬಿಟ್ಟು ಬೆಂಗಳೂರಿಗೆ, ತಂದೆಯ ತೆಕ್ಕೆಗೆ ಮರಳಿ ಬಂದರು ರಘು. ಆದರೆ ಅದಾಗಲೇ ತಮ್ಮ ಮರ್ಯಾದೆಯನ್ನು ಸಾಕಷ್ಟು ಕಳೆದಿದ್ದ ಮಗನನ್ನು ಪ್ರೀತಿಯಿಂದ ಸ್ವಾಗತಿಸಲು ಪಾಪಯ್ಯನವರಿಗೆ ಸಾಧ್ಯವಾಗಲೇ ಇಲ್ಲ. ಮಗ ತಮ್ಮ ಹೆಸರಿಗೆ, ಮನೆತನಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದ. ತಾವು ಮಾತು ಕೊಟ್ಟಿರುವುದು ಗೊತ್ತಿದ್ದೂ ಸಂಬಂಧಿಕರ ಹುಡುಗಿಯನ್ನು ತಿರಸ್ಕರಿಸಿ ನಟಿಯ ಹಿಂದೆ ಹೋಗಿದ್ದ ಅನ್ನುವುದು ಅವರ ಪ್ರತಿಷ್ಠೆಗೆ ಬಿದ್ದ ಪೆಟ್ಟಾಗಿತ್ತು. ತಂದೆಯನ್ನು ಒಲಿಸಿಕೊಳ್ಳಲು ತಮ್ಮನ ರಾಯಭಾರ ಮಾಡಿಸಿದ ರಘುವೀರ್, ತಕ್ಕಮಟ್ಟಿಗೆ ಯಶಸ್ಸು ಪಡೆದು, ಜೀವನ ಸಾಗಿಸಿಕೊಂಡು ಹೋಗುವಷ್ಟು ಅನುಕೂಲ ಮಾಡಿಕೊಂಡರು.

ಕೊನೆಯ ದಿನಗಳು
ರಘುವೀರ್ ಬದುಕಿನ ಕೊನೆಯ ದಿನಗಳ ಬಗ್ಗೆ ಹೇಳುತ್‌ತ ಹೋದರೆ, ಅವರ ಸಿನೆಮಾ ಸಾಧನೆಗಳೆಲ್ಲವನ್ನೂ ನೀವಾಳಿಸಿ ಎಸೆಯುವಂತಾಗುತ್ತದೆ. ಅವರು ಸಿನೆಮಾ ರಂಗದಲ್ಲಿ ಸತತವಾಗಿ ಸಕ್ರಿಯರಾಗಿದ್ದುದು ನಾಲ್ಕು ವರ್ಷಗಳ ಕಾಲವಷ್ಟೆ. ಅನಂತರ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿದ್ದುಂಟು. ಆದರೆ ಅವರ ಬದುಕು ಮಾತರ ಯಾವ ದುರಂತ ಸಿನೆಮಾಕ್ಕೂ ಕಡಿಮೆಯಿಲ್ಲದಂತೆ ಮುಗಿದುಹೋಯ್ತು. ಚೆನ್ನೈ ಜೊತೆಗೇ ಹೆಂಡತಿಯನ್ನೂ ಮಗಳನ್ನೂ ಬಿಟ್ಟುಬಂದ ರಘುವೀರ್, ಆಕೆಯಿಂದ ಸತ್ತರೂ ಮುಖ ನೋಡಲು ಬಿಡಬೇಡಿ ಅನ್ನಿಸಿಕೊಂಡು ಬೆಂಗಳೂರಿನಲ್ಲಿ ಉಳಿದರು. ತಂದೆ ತೋರಿಸಿದ ಹುಡುಗಿಯನ್ನೆ ಮದುವೆಯಾಗಿ ಒಂದು ಹೆಣ್ಣುಮಗುವನ್ನೂ ಪಡೆದರು.
ಅವರ ಸಾಧನೆ ಅಷ್ಟಕ್ಕೇ ಮುಗಿಯುತ್ತದೆ. ಅಲ್ಲಿಂದ ಮುಂದೆ ಅವರು ಅದೆಷ್ಟು ಕೆಳಮಟ್ಟದ ಬಾಳನ್ನು ಬದುಕಿದರು ಎನ್ನುವುದನ್ನು ಹೇಳುವುದಕ್ಕೆ ಅವರ ಗೆಳೆಯರೇ ನಾಚಿಕೊಳ್ಳುತ್ತಾರೆ. ಸ್ವತಃ ಶೋಭರಾಜ್ ತಾವು ರಘುವೀರ್ ಜೊತೆ ಅಷ್ಟೇನೂ ಸಂಪರ್ಕದಲ್ಲಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅವರಿಬ್ಬರೂ ಬಾಲ್ಯದ ಗೆಳೆಯರು ಮಾತ್ರವಲ್ಲ, ಶೋಭರಾಜ್ ಸಿನೆಮಾ ರಂಗದಲ್ಲಿ ನೆಲೆ ಕಂಡುಕೊಂಡಿದ್ದೇ ರಘುವೀರ್‌ರಿಂದ ಎನ್ನುವ ಹಿನ್ನೆಲೆಯಲ್ಲಿ ನೋಡಿದಾಗ ಈ ಅಂಶ ಅಚ್ಚರಿ ಹುಟ್ಟಿಸುತ್ತದೆ.
ರಘುವೀರ್‌ರಿಂದ ಒಂದು ಕಾಲದಲ್ಲಿ ಉಪಕೃತಗೊಂಡವರ‍್ಯಾರೂ ಕೊನೆಗಾಲದಲ್ಲಿ ಅವರೊಡನೆ ಇರಲಿಲ್ಲ. ಹಾಗಂತ ರಘುವಿಗೆ ಗೆಳೆಯರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಆದರೆ ಅವರೆಲ್ಲ ರಘುವಿನ ಬಳಿ ಬಾಕಿ ಇದ್ದ ಅಲ್ಪಸ್ವಲ್ಪ ಸೊತ್ತನ್ನೂ ಕಳೆಯಲು ಸಹಾಯ ಮಾಡುವಂಥವರೇ ಆಗಿದ್ದರು. ರಘುವೀರ್ ಒಂದು ಕಾಲದಲ್ಲಿ ಸಿನೆಮಾ ನಂಟಿನೊಡನೆ ಪರಿಚಿತರಿದ್ದವರ ಬಳಿಯೆಲ್ಲ ಕೈಚಾಚತೊಡಗಿದ್ದರು. ಹಲವರ ಬದುಕು ಕಟ್ಟಲು ನೆರವಾಗಿದ್ದ ಕೈಗಳು ಅಕ್ಷರಶಃ ನೂರು ರೂಪಾಯಿ ನೋಟಿಗೆ ಒಡ್ಡುತ್ತಿದ್ದವು. ಯಾರು ಸಿಕ್ಕರೂ ಒಂದು ಪೆಗ್ ಎಂದು ಆಸೆಗಣ್ಣಾಗುತ್ತಿದ್ದ ರಘು, ಕುಡಿಕುಡಿದೇ ತಮ್ಮ ಮೂರ್ಛೆ ರೋಗವನ್ನು ಮತ್ತಷ್ಟು ಗಟ್ಟಿಯಾಗಿ ಸಾಕಿಕೊಂಡಿದ್ದರು.
ಮುಗಿಲ ಚುಂಬನ ಸಿನೆಮಾದ ಭರ್ಜರಿ ಸೋಲಿನ ನಂತರವಂತೂ ವ್ಯಗ್ರವಾಗಿಹೋಗಿದ್ದ ರಘು, ಆ ಸೋಲಿನ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರು. ಕಳಕೊಂಡಲ್ಲಿಯೇ ಹುಡುಕಿಕೊಳ್ಳುವ ಮಾತಾಡಿದರು. ಅವರೀಗ ನಾಯಕ ನಟನ ಪಾತ್ರಕ್ಕೆ ಒಗ್ಗುವುದಿಲ್ಲವೆಂದು ಯಾರೆಷ್ಟೇ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ತಮ್ಮ ಹಾಗೂ ಸಿಂಧು ನಡುವಿನ ಪ್ರೇಮ ಹಾಗೂ ನಂತರ ಘಟನೆಗಳನ್ನ ಆಧಾರವಾಗಿಟ್ಟುಕೊಂಡು ಈ ಪ್ರೀತಿ ಯಾರಿಗೋಸ್ಕರ ಎಂಬ ಸಿನೆಮಾ ಕಥೆ ಹೆಣೆದರು. ಅದನ್ನು ಸಿನೆಮಾ ಮಾಡಲು ಯಾರೂ ಮುಂದೆ ಬರಲಿಲ್ಲ. ಒಂದು ಕಾಲದಲ್ಲಿ ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯಗಳ ಸ್ಕ್ರಿಪ್ಟ್ ಮಾಡಿದವನು ನಾನೇ. ನನ್ನ ಕತೆಯನ್ನು ನಾರಾಯಣ್ ಕದ್ದು ಬೇರೆ ಸಿನೆಮಾ ಮಾಡಿದರು ಎಂದೆಲ್ಲ ಹೇಳಿಕೊಂಡು ಓಡಾಡಿದರೂ ಯಾರೂ ಸೊಪ್ಪು ಹಾಕಲಿಲ್ಲ. ಈ ನಡುವೆ ಈ ಪ್ರೀತಿ ಯಾರಿಗೋಸ್ಕರ ಸಿನೆಮಾದ ನಿರ್ದೇಶಕನೊಂದಿಗೂ ಜಗಳಾಡಿಕೊಂಡರು. ಆ ಸಿನೆಮಾಕ್ಕೆಂದು ವಿವಿ ಪುರಂ ಕಾಲೇಜಿನಿಂದ ವಿದ್ಯಾರ್ಥಿನಿಯೊಬ್ಬಳನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಕೊನೆಗೆ ಸಿನೆಮಾ ಏನಾಯಿತೋ.. ನಾಯಕಿ ಏನಾದರೋ.. ರಘುವೀರ್ ಮಾತ್ರ ಮತ್ತಷ್ಟು ಕುಸಿದುಹೋದರು.
ಒಂದು ಗೀಳು ಹಚ್ಚಿಕೊಂಡವರು ತಮ್ಮ ಜೀವ ತೆತ್ತರೂ ಅದನ್ನ ಪೂರೈಸಿಕೊಳ್ಳಲು ಹಂಬಲಿಸ್ತಾರೆ. ಆದರೆ ಯಾವುದೇ ಗೀಳು ಹತ್ತಿಸಿಕೊಳ್ಳುವ ಮುನ್ನ ಅದಕ್ಕೆ ತಕ್ಕ ಯೋಗ್ಯತೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ರಘು ಈ ಮಾತನ್ನು ಮರೆತರು. ಅವರಿಗೆ ತಾನು ನಾಯಕ ನಟನಾಗಿಯೇ ಮರಳಿ ಬರಬೇಕೆನ್ನುವ ಹಠವಿತ್ತು. ಸಿನೆಮಾ ರಂಗದ ಸಾಕಷ್ಟು ಜನ ಅವರಿಗೆ ವಾಸ್ತವ ಪ್ರಜ್ಞೆ ಮೂಡಿಸಲು ಪಾಡುಪಟ್ಟರು. ಮೊಂಡು ಹಟದ ರಘು ಅವರ ಮಾತು ಕೇಳದೆ ಇದ್ದುದು ಮಾತ್ರವಲ್ಲ, ಬುದ್ಧಿ ಹೇಳಿದವರನ್ನೆಲ್ಲ ದೂರ ಮಾಡುತ್ತ ಹೋದರು. ತಾವು ಮತ್ತೆ ಬಂದಿತು ಚೈತ್ರ ಅನ್ನುವ ಸಿನೆಮಾ ಮಾಡುವುದಾಗಿಯೂ ತಾವೇ ನಾಯಕನೆಂದೂ ನಾರಾಯಣ್ ನಿರ್ದೇಶಿಸುವರೆಂದೂ ಹೇಳಿಕೊಂಡು ತಿರುಗಿದರು. ಇದು ಮತ್ತೊಂದು ಚೈತ್ರದ ಪ್ರೇಮಾಂಜಲಿ ಆಗಲಿದೆ. ಆ ವೈಭವ ಮತ್ತೆ ಮರಳಲಿದೆ ಎಂದೆಲ್ಲ ಹೇಳಿಕೊಂಡರು. ಸ್ವತಃ ನಾರಾಯಣ್ ಈ ಸುದ್ದಿಯನ್ನು ಅಲ್ಲಗಲೆಯುವ ಮೂಲಕ ರಘು ಭ್ರಮೆಗೆ ನೀರೆರಚಿದರು.
ಈ ನಡುವೆ ನಾಯಕಿ ನಟಿಯರನ್ನು ಕೀಳಾಗಿ ಬೈಯುತ್ತ, ಅವರ ಜೀವನದ ಬಗ್ಗೆ ಅಸಹ್ಯಕರವಾಗಿ ಮಾತಾಡುತ್ತ ಓಡಾಡುವುದು ಶುರುವಾಯ್ತು. ತಮ್ಮೆಲ್ಲ ವಿಕೃತಿಗಳನ್ನೂ ಫ್ರಸ್ಟ್ರೇಷನ್ ಅನ್ನು ಮುಚ್ಚಿಕೊಳ್ಳಲಿಕ್ಕಾಗಿ ಮಾಡಬಾರದೆಲ್ಲ ಮಾಡತೊಡಗಿದರು ರಘುವೀರ್. ಇದು ಅವರ ಸ್ನೇಹಿತರನ್ನು ಮತ್ತಷ್ಟು ದೂರ ಮಾಡಿತು. ಅಷ್ಟಿಷ್ಟು ಸಂಪರ್ಕದಲ್ಲಿದ್ದವರು ಕೂಡ ರಘುವೀರ್ ನನ್ನ ಒಂದು ಕಾಲದ ಗೆಳೆಯ ಎನ್ನತೊಡಗಿದರು. ಕಂಡವರ ಬಳಿಯೆಲ್ಲ ದುಡ್ಡಿಗೆ ಕೈಯೊಡ್ಡುವುದು, ಕುಡಿಯುವುದು, ಸೆಕ್ಸ್ ಸ್ಕ್ಯಾಂಡಲ್ – ಹೀಗೆ ಬದುಕಿನ ಕೊನೆಯ ದಿನಗಳನ್ನು ದುರ್ಬರವಾಗಿ ಬದುಕಿದ ರಘುವೀರ್ ಸ್ಯಾಂಡಲ್‌ವುಡ್‌ನ ಒಂದು ಅತಿ ಕೆಟ್ಟ ನಿದರ್ಶನವಾಗಿ ಹೆಸರುಳಿಸಿ ಹೋದರು.

*******************

ಸ್ವಯಂಕೃತಾಪರಾಧ
ರಘುವೀರ್ ಕೊನೆಯ ವರ್ಷಗಳಲ್ಲಿ ಸೆಕ್ಸ್ ಧಂಧೆಗೆ ಇಳಿದಿದ್ದರಾ? ಹೀಗೊಂದು ಅನುಮಾನ ಕಾಡುತ್ತದೆ. ಅವರು ಮೈಸೂರಿನ ಹೋಟೆಲ್‌ಗಳಲ್ಲಿ ಎರಡು ಬಾರಿ ಸಿಕ್ಕಿಕೊಂಡಿದ್ದರು. ಲಾಡ್ಜ್‌ನಲ್ಲಿ ಹೀರೋಯಿನ್ಗಳ ’ಸ್ಕ್ರೀನ್ ಟೆಸ್ಟ್’ ಮಾಡುತ್ತಿದ್ದೆನೆಂದು ಹೇಳಿಕೆ ನೀಡಿ ಅಪಹಾಸ್ಯಕ್ಕೀಡಾಗಿದ್ದರು. ಅರೆಬರೆ ಬಟ್ಟೆಯಲ್ಲಿ, ಕುಡಿತದ ಮತ್ತಿನಲ್ಲಿ, ಕೋಣೆಯೊಂದರಲ್ಲಿ ನಾಲ್ಕೈದು ಗಂಡಸರು, ಮೂರ್ನಾಲ್ಕು ಹುಡುಗಿಯರು ಸ್ಕ್ರೀನ್ ಟೆಸ್ಟ್‌ನಲ್ಲಿ ಭಾಗಿಯಾಗುವುದು ಎಂದರೇನು!? ಜೊತೆಯಲ್ಲಿದ್ದವರನ್ನು ’ಪ್ರೊಡ್ಯೂಸರ್‌ಗಳು’ ಎಂದು ಹೇಳಿಕೊಂಡಿದ್ದರು ರಘುವೀರ್. ಅಸಲಿಗೆ ಅವರು ಗಿರಾಕಿಗಳಾಗಿದ್ದರಾ? ರಘುವೀರ್ ಸಿನೆಮಾದ ಹೆಸರಿನಲ್ಲಿ ಹುಡುಗಿಯರನ್ನು ಕರೆತಂದು ಒದಗಿಸ್ತಿದ್ದರಾ? ಅಥವಾ ಅವರ ಜೊತೆ ಸಿಕ್ಕಿಬಿದ್ದ ಹುಡುಗಿಯರು ಕಾಲ್‌ಗರ್ಲ್‌ಗಳೇ ಆಗಿದ್ದರಾ? ರಘುವೀರ್ ಈ ಮಟ್ಟಕ್ಕೆ ಇಳಿದಿದ್ದಾದರೂ ಹೇಗೆ? ಕೋಟ್ಯಧಿಪತಿಯ ಮಗ ಸಾಯುವ ಕಾಲಕ್ಕೆ ಸಾಧಾರಣ ಮನೆಯಲ್ಲಿ, ಸುತ್‌ತ ಜನರಿಲ್ಲದೆ ಅನಾಥನಂತೆ ಸಾಯುವ ಸ್ಥಿತಿ ತಲುಪಿದ್ದು ಹೇಗೆ? ಇದು ಸ್ವಯಂಕೃತಾಪರಾಧ ಅಲ್ಲವೆ? ಪ್ರಶ್ನೆಗಳು ಉಳಿದುಹೋಗಿವೆ.

Advertisements

ದುರಂತ ಕಾವ್ಯ ~ ಜಗಳಗಂಟತನವೂ ಮುಳ್ಳಾಯ್ತೆ?

ಕಳೆದೆರಡು ಸಂಚಿಕೆಗಳಲ್ಲಿ ದುರಂತ ನಾಯಕ ಎಂದು ಕರೆಸಿಕೊಂಡ ರಘುವೀರನ ಹಲವು ಮುಖಗಳನ್ನು ನೋಡಿದ್ದೀರಿ. ಆತ ತನ್ನ ಹೆಂಡತಿ ಸಿಂಧು ಪಾಲಿಗೆ ಖಳನಾಯಕನಾಗಿ ಮಾರ್ಪಟ್ಟಿದ್ದನ್ನೂ ಸಮಾಜದ ಗಣ್ಯವ್ಯಕ್ತಿಯಾಗಿದ್ದ ತಂದೆಯ ನೆಮ್ಮದಿ ಕಿತ್ತುಕೊಂಡ ಬಗೆಯನ್ನೂ ಓದಿದ್ದೀರಿ. ಇನ್ನೂ ಒಳಹೊಕ್ಕು ರಘುವೀರ್ ಬದುಕಿನ ಪುಟ ತೆರೆದಂತೆಲ್ಲ ಆತನ ಇನ್ನಷ್ಟು ಮುಖಗಳ ಅನಾವರಣವಾಗುತ್ತದೆ. ಜಗತ್ತಿನ ಕಣ್ಣಿಗೆ ಭಗ್ನ ಹೃದಯಿಯಂತೆ ಕಾಣಿಸಿಕೊಳ್ಳುತ್ತ ಅನುಕಂಪ ಗಿಟ್ಟಿಸಿದ ರಘುವೀರ್ ಅಂತರಂಗದಲ್ಲಿ ಶುದ್ಧ ಆಲಸಿ, ಅಸಹಿಷ್ಣು ಮತ್ತು ಜಗಳಗಂಟರಾಗಿದ್ದರು ಅನ್ನುವುದನ್ನು ನೀವು ಈ ಸಂಚಿಕೆಯಲ್ಲಿ ಓದಲಿದ್ದೀರಿ. ‘ದುರಂತ ಕಾವ್ಯ’ ಸರಣಿಯ ಈ ಭಾಗವ ನಿಮಗೆ ಇಂಡಸ್ಟ್ರಿಯಲ್ಲಿ ರಘು ಬಗೆಯ ಪರಿಚಯ ಮಾಡಿಸಲಿದೆ.

ಅದು ೧೯೯೦ನೆ ಇಸವಿ. ರಘುವೀರ್ ಎಂಟರ್ಪ್ರೈಸ್ ‘ಅಜೇಯ್ ವಿಜಯ್’ ಅನ್ನುವ ಸಿನೆಮಾ ತಯಾರಿಸುತ್ತದೆ. ಎಮ್.ಮಹೇಶ್ ಕುಮಾರ್ ಇದರ ನಿರ್ಮಾಪಕರು. ಮುರುಳಿ ನಾಯಕ ನಟ. ಮಾಂಬಳ್ಳಿ ಕುಟುಂಬ ತಯಾರಿಸುವ ಈ ಸಿನೆಮಾದ ಮುಹೂರ್ತದ ಘಳಿಗೆವರೆಗೂ ಚಿತ್ರದಲ್ಲಿ ಎರಡನೆ ನಾಯಕ ಇರುವ ಮಾಹಿತಿ ಸ್ವತಃ ಆಪ್ತವಲಯಕ್ಕೂ ಗೊತ್ತಿರುವುದಿಲ್ಲ. ಅತ್ತ ನಿರ್ದೇಶಕ ಎ.ಟಿ.ರಘು ಮುಹೂರ್ತದ ತೆಂಗಿನ ಕಾಯಿ ಒಡೆಯುತ್ತಾರೆ, ಇತ್ತ ಕುಟುಂಬದ ಕುಡಿ ರಘುವೀರ್ ಚಿತ್ರದ ಎರಡನೆ ನಾಯಕರಾಗಿ ಘೋಷಣೆಯಾಗುತ್ತಾರೆ. ಗೆಳೆಯರಿಗೆ ಇದೊಂದು ಹಿತವಾದ ಅಚ್ಚರಿ!
ಹಾಗಂತ ರಘುವೀರ್ ಸಿನೆಮಾ ರಂಗ ಪ್ರವೇಶಿಸಿದ್ದು ಆಕಸ್ಮಿಕವೇನಲ್ಲ. ನಟಿಸಬೇಕೆಂದೇ ಆತ ಚನ್ನೈಗೆ ಹೋಗಿ ತರಬೇತಿ ಪಡೆದುಬಂದಿದ್ದರು. ರಘು ತಂದೆ ತಮ್ಮ ಮಗನಿಗೆ ಏನೆಲ್ಲ ಸವಲತ್ತು ಒದಗಿಸಿಕೊಡಬೇಕೋ ಎಲ್ಲವನ್ನೂ ಒದಗಿಸಿಕೊಟ್ಟು ಆತನನ್ನು ನಾಯಕನಾಗಿಸಿಯೇ ಸಿದ್ಧ ಎಂದು ಟೊಂಕ ಕಟ್ಟಿ ನಿಂತಿದ್ದರು. ಅದರ ಫಲವಾಗಿಯೇ ರಘುವೀರ್ ಎಂಟರ್ಪ್ರೈಸ್ ತಲೆ ಎತ್ತಿತು, ರಘುವೀರ್ ಬಣ್ಣ ಹಚ್ಚಿದರು. ಅಷ್ಟೇನೂ ಸುದ್ದಿ ಮಾಡದೆ ಇದ್ದರೂ ಈ ಸಿನೆಮಾ ಕನ್ನಡದ ಮುಂದಿನ ದಿನಗಳ ಜನಪ್ರಿಯ ನಿರ್ದೇಶಕನೊಬ್ಬನ ಬದುಕಿಗೆ ಮುನ್ನುಡಿ ಬರೆದಿತ್ತು. ಚಿತ್ರೀಕರಣದ ಉದ್ದಕ್ಕೂ ಚುರುಕಾಗಿ ಓಡಾಡಿಕೊಂಡಿದ್ದ ಎಸ್.ನಾರಾಯಣ್ ಎನ್ನುವ ಮಾಸ್ಟರ್ ಮೈಂಡ್ ಅನ್ನು ಗುರುತಿಸಿದ ರಘುವೀರ್, ನಾಣಿಯ ಗೆಳೆತನ ಬೆಳೆಸಿದರು. ಅದರ ಪ್ರತಿಫಲ ಈಗ ಕನ್ನಡ ಚಿತ್ರರಂಗದ ಒಂದು ಇತಿಹಾಸ ಪುಟ.

ಚೈತ್ರ ಕಾಲ
ಅಜೇಯ್ ವಿಜಯ್ ಮೂಲಕ ಸಿನೆಮಾ ಗೀಳು ಹೆಚ್ಚಿಸಿಕೊಂಡ ರಘುವೀರ್ ಎರಡನೇ ಚಿತ್ರದ ತಯಾರಿ ನಡೆಸಿದರು. ಈ ಬಾರಿ ಅವರ ಕುಟುಂಬ ಎಮ್.ಸಿ.ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಯ್ತು. ಕುಟುಂಬದವರೇ ವಿವಿಧ ಜವಾಬ್ದಾರಿ ಹೊತ್ತುಕೊಂಡು ಅಖಾಡಾಕ್ಕಿಳಿದರು. ರಘುವೀರ್ ಹಗಲಿರುಳು ನಾರಾಯಣ್ ಜೊತೆ ಕುಳಿತು ಚಿತ್ರಕಥೆ ಹೆಣೆದರು. ಕಥೆ, ಚಿತ್ರಕಥೆ, ಸಂಭಾಷಣೆ – ಎಲ್ಲ ಜವಾಬ್ದಾರಿಯನ್ನೂ ನಾರಾಯಣ್ ಹೊತ್ತುಕೊಂಡರು. ಅಜೇಯ್ ವಿಜಯ್ ಸಿನೆಮಾದಲ್ಲಿ ಸಹನಿರ್ದೇಶಕರಾಗಿ ದುಡಿದಿದ್ದ ನಾರಾಯಣ್ಗೆ ಇದು ಸುವರ್ಣಾವಕಾಶ. ಶತಾಯಗತಾಯ ಇದನ್ನು ಗೆಲ್ಲಿಸಲೇಬೇಕಿತ್ತು. ತಮ್ಮೆಲ್ಲ ಕೌಶಲ ಬಸಿದು ಸಿನೆಮಾ ಹೆಣೆದರು. ಹಂಸಲೇಖ ಕೂಡ ಚಿರಕಾಲ ಉಳಿಯುವಂತ ಹಾಡುಗಳನ್ನು ಬರೆದು ಸಂಗೀತ ನೀಡಿದರು. ಈ ಎರಡರ ಬಲದ ಮೇಲೆ ಸಿನೆಮಾ ಗೆದ್ದಿತು. ಇರುಳು ಹಗಲಾಗುವುದರ ಒಳಗೆ ನಾರಾಯಣ್ ಜನಪ್ರಿಯತೆ ಪಡೆದುಕೊಂಡರು. ಹಂಸಲೇಖ ಜನರ ಮನದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡರು. ಈ ಇಬ್ಬರೂ ಮುಂದಿನ ದಿನಗಳಲ್ಲಿ ತಮ್ಮ ಗ್ರಾಫ್ ಏರಿಸಿಕೊಳ್ಳುತ್ತ ಹೋದರು. ಚೈತ್ರದ ಪ್ರೇಮಾಂಜಲಿಯ ಗೆಲುವಿನ ಅಲೆ ರಘುವೀರ್ ಗೆ ಅವಕಾಶಗಳನ್ನು ಒದಗಿಸಿತಾದರೂ ಅವರು ಮಾತ್ರ ಗೆಲುವು ಕಾಣಲಿಲ್ಲ. ತಾವೇ ಪರಿಚಯಿಸಿದ ನಿರ್ದೇಶಕನ ಗೆಲುವು ಶುರುವಿನ ದಿನಗಳಲ್ಲಿ ರಘುವೀರ್ ಗೆ ಖುಷಿ ಕೊಟ್ಟಿತಾದರೂ ಮುಂದಿನ ದಿನಗಳಲ್ಲಿ ಚಡಪಡಿಕೆ ಹಚ್ಚಿಕೊಂಡರು.
ಅದ್ಯಾಕೋ ರಘು ಎಷ್ಟು ಕೇಳಿಕೊಂಡರೂ ನಾರಾಯಣ್ ಅವರ ಜೊತೆ ಎರಡನೇ ಚಿತ್ರ ಮಾಡುವ ಮನಸ್ಸು ಮಾಡಲಿಲ್ಲ. ಅವರ ಮೂರನೆ ಚಿತ್ರವೂ ಹೋಮ್ ಪ್ರೊಡಕ್ಷನ್ದಾಗಿರಲಿಲ್ಲ. ‘ಶೃಂಗಾರ ಕಾವ್ಯ’ದ ಮೂಲಕ ಮತ್ತೊಬ್ಬ ಯಶಸ್ವಿ ನಿರ್ದೇಶಕನ ಉದಯವಾಯಿತು. ರಘುವಿನ ವೈಯಕ್ತಿಕ ಬದುಕೂ ಒಂದು ದಡ ಕಂಡುಕೊಂಡಿತು. (ಆಮೇಲೆ ಅದು ಮುಳುಗಿಹೋಯಿತೆನ್ನುವುದು ಬೇರೆ ವಿಷಯ). ಆದರೆ ಈ ಸಿನೆಮಾದ ಅನಂತರ ರಘುವಿಗೆ ಉತ್ತಮ ಚಿತ್ರಗಳು ಸಿಗಲಿಲ್ಲ. ತುಂಗ ಭದ್ರ ಸಿನೆಮಾವನ್ನು ಪ್ರೆಕ್ಷಕರು ಸಾರಾಸಗಟು ತಿರಸ್ಕರಿಸಿದರು. ಅತ್ತ ಶೃಂಗಾರ ಕಾವ್ಯದ ನಿರ್ದೇಶಕ ಸಿನೆಮಾಗಳ ಮೇಲೆ ಸಿನೆಮಾ ಮಾಡುತ್ತ ಏರಿಕೆ ಕಾಣುತ್ತಿದ್ದರೆ, ರಘು ಫ್ಲಾಪ್ಗಳ ಲೆಕ್ಕವಿಡುತ್ತ ಕುಗ್ಗಿ ಹೋದರು.

ನಾಣಿ ಮೇಲೆ ಮುನಿಸು
ಈ ಸಂದರ್ಭದಲ್ಲೇ ರಘುವೀರ್ ನಾರಾಯಣ್ರ ಸಹಕಾರ ಬಯಸಿದ್ದು. ತಮಗೆ ಸ್ಟಾರ್ ಪಟ್ಟ ತಂದುಕೊಟ್ಟ ನಿರ್ದೇಶಕ ಮನಸ್ಸು ಮಾಡಿದರೆ ತಾವು ಮತ್ತೆ ಚಿತ್ರ ರಂಗದಲ್ಲಿ ಮಿಂಚಬಹುದೆಂದು ರಘು ಕನಸಿದರು. ಆದರೆ ನಾಣಿ ತಿರುಗಿ ನೋಡಲಿಲ್ಲ. ಅವರ ಅನುರಾಗದ ಅಲೆಗಳು ಸಿನೆಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ರಘುವೀರ್ ಅದು ತಮ್ಮ ಕಥೆಯನ್ನು ಕದ್ದು ಮಾಡಿದ ಸಿನೆಮಾ ಎಂದು ದೂರಲು ಶುರುವಿಟ್ಟರು. ಬಹಳ ವರ್ಷಗಳ ತನಕ ರಘು “ನನಗೆ ಸಿನೆಮಾ ಮಾಡಿಕೊಡುತ್ತೇನೆಂದು ಕಥೆ ಕೇಳಿ ತಾನು ಮಾಡಿದ್ದಕ್ಕೇ ಆ ಸಿನೆಮಾ ಸೋತಿತು” ಎಂದು ಹೇಳುತ್ತಿದ್ದರು. ಅವರ ತೆರೆ ಕಂಡ ಕೊನೆಯ ಸಿನೆಮಾ ’ಮುಗಿಲ ಚುಂಬನ’ದ ಸಮಯದಲ್ಲೂ ನಾರಾಯಣ್ರ ಮೇಲೆ ಹರಿಹಾಯ್ದಿದ್ದ ರಘುವೀರ್, “ತನ್ನ ಮಗನನ್ನೆ ಸ್ಟಾರ್ ಮಾಡಲಾಗದವ ಯಾರನ್ನೇನು ಮಾಡಿಯಾನು? ಚೈತ್ರದ ಪ್ರೇಮಾಂಜಲಿಯಿಂದ ನಾನು ಸ್ಟಾರ್ಗಿರಿ ಪಡೆದಿದ್ದರೆ, ಅದು ನನ್ನ ಬಲದಿಂದಷ್ಟೆ” ಎಂದಿದ್ದರು. ನಾರಾಯಣ್ ಮೇಲೆ ಈ ಪಾಟಿ ಮುನಿದುಕೊಳ್ಳುವಂಥದ್ದು ನಡೆದಿದ್ದಾದರೂ ಏನು?

ರಾಜು ಜೊತೆ ಜಟಾಪಟಿ
ರಘುವೀರ್ ಕೊನೆಯುಸಿರೆಳೆದಾಗ ಸ್ಯಾಂಡಲ್ವುಡ್ಡಿನಿಂದ ಅವರನ್ನು ನೋಡಲು ಹೋಗಿದ್ದು ಬೆರಳೆಣಿಕೆಯಷ್ಟು ಮಂದಿ. ಸರಿಯಾಗಿ ಹೇಳಬೇಕೆಂದರೆ ಶೋಭರಾಜ್ ಒಬ್ಬರೇ. ಈ ಶೋಭರಾಜ್ ಕೂಡ ಸಿನೆಮಾ ಹೊರಗಿನ ಗೆಳೆಯ. ಬಾಲ್ಯಕಾಲದಿಂದಲೂ ಒಡನಾಡಿದ ಪರಿಣಾಮವೇ ಅವರಿಬ್ಬರೂ ಒಟ್ಟಿಗೆ ಒಂದಷ್ಟು ಸಿನೆಮಾಗಳಲ್ಲಿ ನಟಿಸುವಂತೆ ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ತೆರೆ ಕಂಡಿದದ್ದ ಮುಗಿಲ ಚುಂಬನದ ನಿರ್ದೇಶಕರಾಗಲೀ ಸಹನಟರಾಗಲೀ ಅವರ ಕಳೇವರ ನೋಡಲು ಹೋಗಲಿಲ್ಲ. ಅರ್ಧಕ್ಕೆ ನಿಂತ ‘ಈ ಪ್ರೀತಿ ಯಾರಿಗೋಸ್ಕರ?’ ಸಿನೆಮಾದ ನಿರ್ದೇಶಕ ಒಂದು ಕಾಲದಲ್ಲಿ ರಘುವಿನ ಆಪ್ತ ಗೆಳೆಯರ ಪಟ್ಟಿಯಲ್ಲಿದ್ದವರು. ಆತ ಕೂಡ ಅಂತ್ಯ ಸಂಸ್ಕಾರದಲ್ಲಿ ಪಲ್ಗೊಳ್ಳಲಿಲ್ಲ.
ಒಬ್ಬ ವ್ಯಕ್ತಿ ಬದುಕಿದ್ದಷ್ಟು ದಿನ ಹೇಗಿದ್ದ ಅನ್ನುವುದು ಅವನ ಮರಣ ಸಮಯದಲ್ಲಿ ತಿಳಿಯುತ್ತದೆ ಅನ್ನುತ್ತಾರೆ. ರಘುವೀರ್ ಚಿತ್ರರಂಗದವರ ಜೊತೆ ಅದೆಷ್ಟು ರಗಳೆ ಮಾಡಿಕೊಂಡಿದ್ದರು ಅನ್ನುವುದನ್ನು ಅವರ ಸಾವಿನ ಸಂದರ್ಭ ಸ್ಪಷ್ಟಪಡಿಸುತ್ತದೆ.
ತಮ್ಮ ಜೀವನ ಕಥೆಯನ್ನೇ ಇಟ್ಟುಕೊಂಡು ‘ಈ ಪ್ರೀತಿ ಯಾರಿಗೋಸ್ಕರ’ ಅನ್ನುವ ಸಿನೆಮಾ ಹೆಣೆದಿದ್ದರು ರಘುವೀರ್. ಅದರ ನಿರ್ದೇಶನಕ್ಕಾಗಿ ಗೆಳೆಯ ರಾಜುವನ್ನು ಕರೆತರುತ್ತಾರೆ. ಆ ಹೊತ್ತಿಗಾಗಲೇ ಅವರೊಂದಿಗೆ ಸಾಕಷ್ಟು ಬಾರಿ ಜಗಳವಾಗಿದ್ದರೂ ಸೋತು ನೆಲಕಚ್ಚಿದ್ದ ರಘುವಿನ ಮೇಲಿನ ಸಹಾನುಭೂತಿಯಿಂದ ರಾಜು ಸಿನೆಮಾ ಮಾಡಿಕೊಡಲು ಒಪ್ಪುತ್ತಾರೆ. ಆದರೆ ಎಲ್ಲವೂ ಸುಸೂತ್ರ ನಡೆಯುವುದಿಲ್ಲ. ರಘುವೀರ್ ಮತ್ತೆ ಜಗಳವಾಡುತ್ತಾರೆ. “ನನ್ನ ಸಿನೆಮಾ ನಾನೇ ಮಾಡಿಕೊಳ್ಳುತ್ತೇನೆ” ಎಂದು ರಾಜುವನ್ನು ಹೊರಹಾಕುತ್ತಾರೆ. ಇದರೊಂದಿಗೆ ಮತ್ತೊಬ್ಬ ಗೆಳೆಯ ರಘು ಬದುಕಿನಿಂದ ಶಾಶ್ವತವಾಗಿ ದೂರವಾಗುತ್ತಾನೆ.

ಬದುಕೆಲ್ಲ ಅಪಜಯವೇ
ರಘುವೀರ್ ಸತ್ತಾಗ ವಯಸ್ಸು ಕೇವಲ ನಲವತ್ತಾರು. ಅದು ಖಂಡಿತವಾಗಿಯೂ ಸಾಯುವ ವಯಸ್ಸಲ್ಲ. ಆದರೆ ರಘು ತಮ್ಮ ಬದುಕನ್ನು ಅದೆಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದರು ಅಂದರೆ, ಬಹುಶಃ ಅವರು ಬದುಕಿದ್ದಿದ್ದರೆ ಮತ್ತಷ್ಟು ದುರ್ದಿನಗಳನ್ನು ನೋಡಬೇಕಾಗುತ್ತಿತ್ತೇನೋ. ಕೆಲವರ ಬದುಕಿಗೆ ಅನಿರೀಕ್ಷಿತ ಅಂತ್ಯವೂ ಒಂದು ವರದಾನವೇ ಆಗಿರುತ್ತದೆ.
ಅಜೇಯ್ ವಿಜಯ್ ನ ರಘುವೀರ್ ಬದುಕೆಲ್ಲ ಜಯದ ವಿರುದ್ಧವೇ ಇತ್ತು. ಶೃಂಗಾರ ಕಾವ್ಯ ದುರಂತ ಕಾವ್ಯವಾಯ್ತು. ‘ಈ ಪ್ರೀತಿ ಯಾರಿಗೋಸ್ಕರ? ಸಿನೆಮಾದಲ್ಲಿ ರಘು ತಮ್ಮ ಬದುಕನ್ನ ಅದೆಷ್ಟು ಬಿಚ್ಚಿಟ್ಟಿದ್ದರೋ ಗೊತ್ತಿಲ್ಲ. ಆದರೆ ಅವರ ಬದುಕು ಮಾತ್ರ ಒಂದು ದುರಂತ ಸಿನೆಮಾ ಕತೆಯಾಗಲಿಕ್ಕೆ ಸಾಕು. ಹೇಗಿರಬಾರದು ಅನ್ನುವ ಪಾಠ ಹೇಳಲಿಕ್ಕಾದರೂ?.

*********
ಪಾಠ ಕಲಿಸಿತ್ತು ಸೋಲು
ಬಹುಶಃ ಸೋಲುಗಳಿಂದ ಪಾಠ ಕಲಿಯದ ವ್ಯಕ್ತಿ ಬದುಕುವ ಅರ್ಹತೆಯನ್ನೆ ಕಳೆದುಕೊಳ್ಳುತ್ತಾನೆ. ರಘುವೀರ್ ವೈಯಕ್ತಿಕ ಬದುಕಲ್ಲಿ ಸೋತಿದ್ದರು. ಎರಡನೆ ಮದುವೆಯಾದ ನಂತರವೂ ಗೆಳೆಯರ ಬಳಗದ ಜೊತೆ ಸೇರಿ ಕುಡಿತದ ಮೋಜಿನಲ್ಲೆ ಮುಳುಗಿರುತ್ತಿದ್ದರು. ಮೂರ್ಛೆ ರೋಗವಾಗಲೀ ಹಣದ ಕೊರತೆಯಾಗಲೀ ಅವರಿಗೆ ಪಾಠ ಕಲಿಸಲಿಲ್ಲ.
ದಶಕದ ನಂತರ ಬಣ್ಣ ಹಚ್ಚಿ ನಟಿಸಿದ್ದ ಮುಗಿಲ ಚುಂಬನ ನೆಲ ಕಚ್ಚಿದಾಗಲೂ ರಘುವೀರ್ ಪಾಠ ಕಲಿಯಲಿಲ್ಲ. ಸಿನೆಮಾ ಗೀಳು ಅವರಿಂದ ತೊಲಗಲಿಲ್ಲ. ಆದರೆ ನಟನೆಯನ್ನು ತೊರೆಯುವ ನಿರ್ಧಾರ ಮಾಡಿದ್ದರು ರಘುವೀರ್. ಇನ್ನು ಮುಂದೆ ನಿರ್ಮಾಣಕ್ಕೆ ಕೈಹಾಕುವೆ ಎಂದು ಹೇಳಿಕೊಂಡಿದ್ದರು. ನಿರ್ಮಾಣಕ್ಕಿಳಿಯಬೇಕೆಂಬ ಕನಸು ಕಂಡು, ತಮ್ಮ ಎಸ್ಟೇಟ್ ಅನ್ನು ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ರೂಪಿಸುತ್ತಿದ್ದರು ರಘುವೀರ್.
ಒಂದು ವಿಷಯದಲ್ಲಿ ರಘುವೀರ್ ಪಾಠ ಕಲಿತಂತಿತ್ತು. ದಶಕಗಳುದ್ದಕ್ಕೂ ನಾರಾಯಣ್ರನ್ನು ಬೈದುಕೊಂಡೇ ಬಂದಿದ್ದ ರಘುವೀರ್, ಕೊನೆಗಾಲದಲ್ಲಿ ಅವರೊಂದಿಗೆ ಸೇರಿ ಸಿನೆಮಾ ಮಾಡುವ ಇರಾದೆ ವ್ಯಕ್ತಪಡಿಸಿದ್ದರು. ಅದನ್ನು ಗೆಳೆಯರೊಂದಿಗೆ ಮಾತಾಡಿ, ನಾರಾಯಣ್ ಕಿವಿ ತಲುಪುವಂತೆ ಮಾಡಿದ್ದರು ಕೂಡ. ಒಂದು ಮೂಲದ ಪ್ರಕಾರ, ನಾರಾಯಣ್ ಕೂಡ ರಘುವೀರ್ ನಿರ್ಮಾಣದ ಚಿತ್ರಕ್ಕೆ ನಿರ್ದೇಕರಾಗಲು ಒಪ್ಪಿಕೊಂಡಿದ್ದರು. ಆದರೆ ಕಾಲ ಈ ಜೋಡಿ ಮತ್ತೆ ಒಗ್ಗೂಡುವ ಅವಕಾಶವನ್ನೆ ನೀಡಲಿಲ್ಲ.

ದುರಂತ ಕಾವ್ಯ ~ ಅದೃಷ್ಟದ ಜೂಜಾಟ

ಸಿನೆಮಾ ನಾಯಕ ರಘುವೀರ್ ನಿಜ ಬದುಕಲ್ಲಿ ತಮಗೆ ತಾವೆ ಖಳ ನಾಯಕನಾದ ಬಗೆಯನ್ನು ಕಳೆದೆರಡು ಸಂಚಿಕೆಯಲ್ಲಿ ಓದಿದ್ದೀರಿ. ರಘುವೀರ್ ತಮ್ಮ ಬದುಕನ್ನು ಮಾತ್ರವಲ್ಲ, ಪ್ರೇಮಿಸಿ ಮದುವೆಯಾದ ಹೆಂಡತಿ ಸಿಂಧು ಬದುಕನ್ನೂ ದುರಂತವಾಗಿಸುತ್ತಾರೆ. ತಪ್ಪು ಆಯ್ಕೆಗಳಿಂದ ವೃತ್ತಿ ಬದುಕನ್ನೂ ದುರಂತವಾಗಿಸ್ಕೊಳ್ತಾರೆ. ಮದ್ಯ ವ್ಯಸನ, ಮೂರ್ಛೆ ರೋಗ, ನಷ್ಟ ಭರಿಸಿಕೊಳ್ಳಲಾಗದ ಅಸಹಾಯಕತೆ ಮತ್ತು ಗೆಲುವು ನಿಭಾಯಿಸಿಕೊಳ್ಳಲಾಗದ ದೌರ್ಬಲ್ಯಗಳು ರಘುವೀರ್ ಅನ್ನು ಸಾವಿನ ಹೊಸ್ತಿಲಿಗೆ ತಂದು ನಿಲ್ಲಿಸಿದವು. ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಮಗನನ್ನು ಮನೆಯಿಂದ ಅಕ್ಷರಶಃ ಹೊರಹಾಕಿದ್ದೇ ರಘು ಬದುಕಿಗೆ ಮುಳಿವಾಯ್ತು ಎಂದು ಬಹಳಷ್ಟು ಜನ ಆಡಿಕೊಳ್ಳುತ್ತಾರೆ. ಆದರೆ ನಿಜಕ್ಕೂ ರಘುವೀರ್ ತಂದೆಯ ಅಂತಃಕರಣ ಎಂಥದಿತ್ತು ಅನ್ನುವುದನ್ನು ಈ ಸಂಚಿಕೆಯ ‘ದುರಂತ ಕಾವ್ಯ’ದಲ್ಲಿ ಪತ್ರಿಕೆ ನಿಮ್ಮ ಮುಂದಿಡುತ್ತಿದೆ…

ಸಿನೆಮಾದಲ್ಲಿ ಮಿಂಚಲು ಟ್ಯಾಲೆಂಟ್ ಇದ್ದರಷ್ಟೆ ಸಾಲದು, ಅದೃಷ್ಟವೂ ಇರಬೇಕಾಗುತ್ತದೆ. ಆದರೆ ಹಣವೊಂದಿದ್ದರೆ ಟ್ಯಾಲೆಂಟ್ ಅಷ್ಟು ಮುಖ್ಯವಾಗುವುದಿಲ್ಲ ಮತ್ತು ಅದೃಷ್ಟ ತಾನಾಗಿ ಹಿಂಬಾಲಿಸುತ್ತದೆ. ನಟ ರಘುವೀರ್‌ಗೆ ಆಗಿದ್ದೂ ಅದೇ. ತೀರಾ ಸಾಧಾರಣ ರೂಪದ, ಸಾಧಾರಣ ಮೈಕಟ್ಟಿನ ರಘುವಿಗೆ ಸಿನೆಮಾ ರಂಗವೇನೂ ಕರೆದು ಅವಕಾಶ ನೀಡಿರಲಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೆ ಅವರನ್ನು ಜನಪ್ರಿಯ ಹೀರೋ ಮಾಡಿದ ಶ್ರೇಯ ಅವರ ತಂದೆ ಮಾಂಬಳ್ಳಿ ಪಾಪಯ್ಯನವರಿಗೆ ಸಲ್ಲುತ್ತದೆ. ಆದರೆ ರಘುವೀರ್ ಜನರ ಕಣ್ಣಲ್ಲಿ ತನ್ನನ್ನು ದುರಂತ ನಾಯಕನಾಗಿಸಿದ ಪಟ್ಟವನ್ನು ತನ್ನ ತಂದೆಗೆ ಕಟ್ಟಿಬಿಟ್ಟಿದ್ದಾರೆ.
ಮಾಂಬಳ್ಳಿ ಪಾಪಯ್ಯ ಸಾಧಾರಣ ಹೆಸರಲ್ಲ. ದಶಕಗಳಷ್ಟು ಹಿಂದೆಯೇ ಬೆಂಗಳೂರಿನ ಖ್ಯಾತ ಗುತ್ತಿಗೆದಾರರಾಗಿ ಹೆಸರು ಮಾಡಿದ್ದವರು. ನಗರದ ಬಿಎಮ್‌ಟಿಸಿ ಬಸ್ ನಿಲ್ದಾಣ, ಪ್ರತಿಷ್ಠಿತ ಚೌಡಯ್ಯ ಹಾಲ್ ಇತ್ಯಾದಿಗಳು ನಿರ್ಮಾಣಗೊಂಡಿದ್ದು ಇವರ ಉಸ್ತುವಾರಿಯಲ್ಲೇ. ರಾಜಕಾರಣವೂ ಸೇರಿದಂತೆ ಸಮಾಜದ ಹಲವು ಪ್ರಭಾವಿ ವಲಯಗಳಲ್ಲಿ ಅವರದ್ದು ಪರಿಚಿತ ಹೆಸರಾಗಿತ್ತು. ಸಹಜವಾಗಿಯೇ ಸಾಂಸ್ಕೃತಿಕ ಕ್ಷೇತ್ರದತ್ತಲೂ ಒಲವು ಬೆಳೆಸಿಕೊಂಡಿದ್ದ ಪಾಪಯ್ಯ ಸಿನೆಮಾ ರಂಗದವರ ಸ್ನೇಹವನ್ನೂ ಹೊಂದಿದ್ದರು.
ಯುವಕ ರಘುವೀರ್ ತೀರ ಶೋಕಿಯವರಲ್ಲದಿದ್ದರೂ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ರಾಜಕುಮಾರ. ಇಪ್ಪತ್ತರ ಹರೆಯದಲ್ಲೆ ಸಿನೆಮಾದಲ್ಲಿ ನಟಿಸುವ ಕನಸು ಕಟ್ಟತೊಡಗಿದ ಮಗನಿಗೆ ಆಸರೆಯಾಗಿ ನಿಂತರು ತಂದೆ. ಮೊದಲ ಚಿತ್ರ ಅಜಯ್ ವಿಜಯ್‌ನಲ್ಲಿ ನಟಿಸಿದ ರಘುವೀರ್ ಎಂಟ್ರಿ ಕೊಟ್ಟಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಇಬ್ಬರು ನಾಯಕರ ಈ ಸಿನೆಮಾ ಕೂಡ ಸುದ್ದಿಯಾಗಲಿಲ್ಲ. ಆದರೆ ರಘುವನ್ನು ಮಾತ್ರ ಸಿನೆಮಾ ಗೀಳು ಬಿಡಲಿಲ್ಲ. ಚೊಚ್ಚಲ ಸಿನೆಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಎಸ್. ನಾರಾಯಣ್‌ರನ್ನು ಮುಂದಿಟ್ಟುಕೊಂಡು ಕಥೆ ಹೆಣೆದರು. ಹಂಸಲೇಖಾ ಸಂಗೀತಕ್ಕೆ ಜೊತೆಯಾದರು. ಮಗನ ಮಹದಾಸೆಗೆ ಬೆಂಬಲವಾಗಿ ನಿಂತ ಪಾಪಯ್ಯ ಎಂ.ಸಿ.ಪ್ರೊಡಕ್ಷನ್ಸ್ ಅನ್ನು ಹುಟ್ಟುಹಾಕಿ ಚಿತ್ರ ನಿರ್ಮಾಣಕ್ಕೆ ನಿಂತರು. ಅವರ ಹೆಂಡತಿ ಶಶಿಕಲಾರೇ ನಿರ್ಮಾಪಕಿಯಾದರು. ಕೊನೆಗೂ ರಘುವೀರ್ ಪಾಲಿಗೆ ಜೀವಮಾನದ ಸಿನೆಮಾ ಒಂದು ತಯಾರಾಗಿ ನಿಂತಿತು.

ಪುತ್ರವಾತ್ಸಲ್ಯ
ಮಗ ಕಣ್ಣ ತುದಿಯಲ್ಲಿ ತೋರಿಸಿದ್ದನ್ನು ಮಾಡಲು ಸಿದ್ಧರಿದ್ದರು ಪಾಪಯ್ಯ. ರಘು ಚೊಚ್ಚಲ ಚಿತ್ರದ ಮುಹೂರ್ತಕ್ಕೆ ಅಣಿಯಾಗುತ್ತಿದ್ದಾಗ ತಮ್ಮ ಮಗ ಜನರ ನಡುವೆ ಮಿಂಚಬೇಕು ಅನ್ನುವ ಬಯಕೆಯಿಂದ ಐವತ್ತು ಜೊತೆ ಶೂಗಳನ್ನು ಖರೀದಿ ಮಾಡಿ ತಂದಿದ್ದ ಪುತ್ರವತ್ಸಲ ಜೀವ ಅದು! ಮುಂದೆ ಚೈತ್ರದ ಪ್ರೇಮಾಂಜಲಿ ಚಿತ್ರೀಕರಣಕ್ಕೆ ಮುನ್ನ ನೃತ್ಯ ಕಲಿಯಲು ಮುಂಬೈಗೆ ಕಳಿಸಿದ್ದರು. ಅಲ್ಲಿನ ಖ್ಯಾತ ನೃತ್ಯ ತರಬೇತುದಾರರಲ್ಲಿ ಅಭ್ಯಾಸಕ್ಕೆ ನಿಯೋಜಿಸಿದ್ದರು. ಅದರ ಓಡಾಟ ನಡೆದಿದ್ದೆಲ್ಲ ವಿಮಾನದಲ್ಲೇ. ಮೊದಲ (ಪೂರ್ಣಪ್ರಮಾಣದ ನಾಯಕತ್ವದಲ್ಲಿ) ಚಿತ್ರದ ತಯಾರಿಯನ್ನು ಇಷ್ಟು ಅದ್ದೂರಿಯಾಗಿ ನಡೆಸಿದ ಕನ್ನಡದ ಮತ್ತೊಬ್ಬ ನಟ ಇದ್ದರೆ ಹೇಳಿ! ಅದನ್ನು ಸಾಧ್ಯವಾಗಿಸಿದ್ದು ರಘು ತಂದೆಯ ಪ್ರೇಮ ತುಂಬಿದ ಹೃದಯವಷ್ಟೇ.
ಚೈತ್ರದ ಪ್ರೇಮಾಂಜಲಿ ಚಿತ್ರ ಎಲ್ಲರಿಗೂ ಲಾಭವನ್ನೆ ತಂದುಕೊಡುತ್ತದೆ. ಅತಿ ಚಿಕ್ಕ ಹರೆಯದಲ್ಲೆ ರಘು ಜನಪ್ರಿಯ ನಟರಾಗುತ್ತಾರೆ. (ನಿಧನರಾದಾಗ ರಘುವಿಗೆ ಕೇವಲ ೪೬ ವರ್ಷ ವಯಸ್ಸು). ಬಹುಶಃ ಈ ಗೆಲುವು ಮುಂದಿನ ದಿನಗಳಲ್ಲಿ ತಮ್ಮಿಂದ ಮಗನನ್ನು ಕಸಿದುಕೊಳ್ಳುತ್ತದೆ ಎಂಬ ಸುಳಿವು ಸಿಕ್ಕಿದ್ದರೆ ಪಾಪಯ್ಯ ಈ ಸಾಹಸಕ್ಕೆ ಕೈಹಾಕುತ್ತಿರಲಿಲ್ಲವೇನೋ. ತಮ್ಮ ಕಣ್ರೆಪ್ಪೆಯಂತೆ ಬೆಳೆಸಿದ್ದ ಜೀವ ತನ್ನ ಮಾತು ಮೀರಿತು ಅನ್ನುವ ಒಂದೇ ಕಾರಣಕ್ಕೆ ಸ್ವಂತದ ನೆಮ್ಮದಿಯನ್ನೂ ಮಗನ ಬದುಕನ್ನೂ ಬೆಲೆಯಾಗಿ ತೆತ್ತು ನರಳಿತು ಆ ಹಿರಿಯ ಜೀವ. ಅವರ ಬಯಕೆಗೆ ವಿರುದ್ಧವಾಗಿ ಸಿಂಧುವನ್ನು ಮದುವೆಯಾದ ರಘುವೀರ್ ಆಕೆಯನ್ನಾದರೂ ಬಾಳಿಸಿದ್ದರೆ ಅಷ್ಟು ಬೇಸರ ಎನ್ನಿಸುತ್ತಿರಲಿಲ್ಲ. ಆದರೆ ಅಂಥಾ ಪ್ರೇಮಮಯಿ ತಂದೆಯ ಆರೋಗ್ಯವನ್ನೂ ಪ್ರತಿಷ್ಠೆಯನ್ನೂ ಬಲಿಕೊಟ್ಟ ರಘುವೀರ್ ಸಾಧಿಸಿದ್ದಾದರೂ ಏನು?

ರಾಮನ ಹೆಸರಿನ ರಘುವೀರ ಮಾಡಿದ್ದೇನು?
ಆಗಿದ್ದಿಷ್ಟು…. ಪಾಪಯ್ಯ ತಮ್ಮ ಸಂಬಂಧಿಕರಲ್ಲೆ ಒಬ್ಬ ಹುಡುಗಿಯನ್ನು ಮಗನಿಗೆ ತಂದುಕೊಳ್ಳುವ ನಿರ್ಧಾರ ಮಾಡಿದ್ದರು. ಅದು ರಘು ಚಿಕ್ಕವರಿರುವಾಗಲೇ ನಡೆದ ವ್ಯವಹಾರ. ಅದರ ಬಗ್ಗೆ ಆತನಿಗೆ ತಿಳಿದಿತ್ತು ಮಾತ್ರವಲ್ಲ, ಒಪ್ಪಿಗೆಯೂ ಇತ್ತು. ಅವರದು ತಿಗಳ ಸಮುದಾಯದ ಕುಟುಂಬ. ಕಡಿಮೆ ಜನಸಂಖ್ಯೆಯ ಈ ಸಮುದಾಯದ ಪ್ರತಿಷ್ಠಿತ ವ್ಯಕ್ತಿಯಾಗಿದ್ದರು ಪಾಪಯ್ಯ. ಅವರಿಗೆ ತಮ್ಮ ಮನೆಯಲ್ಲೇ ಇಂಥ ವಿರೋಧ ಬಂದುದನ್ನು ಸಹಿಸುವುದು ಅಸಾಧ್ಯವಾಗಿತ್ತು. ಇದರಿಂದ ಸಮಾಜಕ್ಕಿಂತ ಹೆಚ್ಚಾಗಿ ತಮ್ಮ ಸಮುದಾಯದೊಳಗೇ ಗೌರವ ಕುಂದುತ್ತದೆಯೆಂದು ಅವರು ನೊಂದಿದ್ದರು. ಸಂಬಂಧಿಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅವರ ಪಾಲಿಗೆ ಪ್ರತಿಷ್ಠೆಯ ಸಂಗತಿಯಾಗಿತ್ತು. ಅವರು ಅದ್ಯಾವ ಯೋಚನೆ ಮಾಡಿ ಮಗನಿಗೆ ‘ರಘುವೀರ’ ಎಂದು ರಾಮನ ಹೆಸರಿಟ್ಟಿದ್ದರೋ ಏನೋ…. ಆ ರಾಮ ತಂದೆಯ ಮಾತನ್ನು ನಡೆಸಲಿಕ್ಕಾಗಿ ರಾಜ್ಯ ಬಿಟ್ಟುಕೊಟ್ಟು ವನವಾಸಕ್ಕೆ ಹೋದ. ಈ ರಘುವೀರ ಮಾತ್ರ ತಂದೆಯ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಅವಮಾನಿಸಿಬಿಟ್ಟ.
ಚಿಕ್ಕ ಪ್ರಾಯ, ಯಶಸ್ಸಿನ ಅಮಲು, ಥಳಕು ಬಳುಕಿನ ಜಗತ್ತು ಹಾಗೂ ಪ್ರೇಮದ ನಶೆಗಳು ಅವನನ್ನು ದಿಗ್ಮೂಢವಾಗಿಸಿದ್ದವೋ ಏನೋ… ತಂದೆ ಪರಿಪರಿಯಾಗಿ ಬೇಡಿಕೊಂಡರೂ ಕರಗಲಿಲ್ಲ. ಅತ್ತ ಪಾಪಯ್ಯ ಮಗನ ಮುಂದೆ ಮಂಡಿಯೂರಿ ಮಾನ ಕಾಪಾಡೆಂದು ಕೇಳುತ್ತಿದ್ದರೆ, ಅಷ್ಟೂ ದಿನ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಉಣಿಸುತ್ತಿದ್ದ ತಾಯಿ ಉರಿದುಬಿದ್ದರು. ಗಂಡನ ಗೌರವಕ್ಕೆ ಮಗನೇ ಧಕ್ಕೆ ತರುತ್ತಿರುವುದನ್ನೂ ಅವರ ದೈನ್ಯವನ್ನೂ ಸಹಿಸದಾದರು. ಹೃದಯ ಕಲ್ಲು ಮಾಡಿಕೊಂಡು ಮಗನನ್ನು ಮನೆಬಿಟ್ಟು ಹೋಗೆಂದರು.

ಮರಳಿ ಮನೆಗೆ
ಮುಂದೆ ಇವೆಲ್ಲ ವಿಪರೀತಕ್ಕೆ ಹೋಯ್ತು. ಮನೆ ಬಿಟ್ಟ ಮಗ ಮರಳಿ ಬರುತ್ತಾನೆಂದು ಕಾದಿದ್ದಷ್ಟೆ ಬಂತು. ರಘುವೀರ್ ಸಿಂಧು ಕೈಹಿಡಿದು ಬೇರೆ ಮನೆ ಮಾಡಿದರು. ಮತ್ತಷ್ಟು ಸಿನೆಮಾಗಳಲ್ಲಿ ನಟಿಸಿದರು. ಬಹುಶಃ ರಘು ಅದೃಷ್ಟವೆಲ್ಲ ಅವರ ತಂದೆಯ ಹಾರೈಕೆಯಲ್ಲೆ ಹುದುಗಿತ್ತೋ ಏನೋ… ಯಾವ ಸಿನೆಮಾವೂ ಕೈಹಿಡಿಯಲಿಲ್ಲ. ಅತ್ತ ಕಾದು ಬೇಸತ್ತ ಪಾಪಯ್ಯ ‘ನಾನು ಸತ್ತರೂ ಅವನನ್ನು ಮನೆಗೆ ಸೇರಿಸಕೂಡದು’ ಅಂದುಬಿಟ್ಟರು. ಅದಾಗಲೇ ಸೋಲು, ದೂರಾಗುತ್ತಿದ್ದ ಗೆಳೆಯ ಬಳಗ, ತಮ್ಮ ಕಥೆ ಕದ್ದು ಬೇರೆ ಹೆಸರಲ್ಲಿ ಸಿನೆಮಾ ಮಾಡಿದ ನಿರ್ದೇಶಕರೊಬ್ಬರ ಮೇಲಿನ ಅಸಹಾಯಕ ಕೋಪ – ಈ ಎಲ್ಲದರಿಂದ ನೊಂದಿದ್ದ ರಘು, ಬೆಂಗಳೂರಿನ ಸಹವಾಸವೇ ಬೇಡವೆಂದು ಹೆಂಡತಿಯ ಪಲ್ಲೂ ಹಿಡಿದು ಚೆನ್ನೈಸೇರಿದರು.
ರಘು ಬದುಕಿನ ದುರಂತವೇ ಇದು. ತನ್ನನ್ನು ಯಾರೆಲ್ಲ ಪ್ರೀತಿಸಿದರೋ ಅವರನ್ನು ಕೆಟ್ಟದಾಗಿ ನಡೆಸಿಕೊಂಡರು. ಅಂಥವರು ದೂರವಾದಾಗ ಅವರ ಬದುಕಿನ ಗೆಲುವುಗಳೂ ದೂರವಾಗುತ್ತ ಹೋದವು. ಹೆಂಡತಿಯೊಡನೆ ಚೆನ್ನೈ ಸೇರಿದ ರಘುವಿಗೆ ಅಲ್ಲಿನ ಕಷ್ಟದ ಬದುಕು ಒಗ್ಗಿ ಬರಲಿಲ್ಲ. ಜೊತೆಗೆ ಕರೆದು ಕೆಲಸ ಕೊಡುವಂತೆ ಪ್ರಭಾವ ಬೀರಲು ಅಲ್ಲಿ ತಂದೆಯ ನೆರಳೂ ಇರಲಿಲ್ಲ. ರಘುವಿಗೆ ತಂದೆಯ ನೆನಪು ಕಾಡತೊಡಗಿತು. ಬೆಂಗಳೂರಿಗೆ ಮರಳಿ ಮನೆಯವರ ಮನವೊಲಿಸೋಣ ಎಂದು ಸಿಂಧುವಿಗೆ ದುಂಬಾಲು ಬಿದ್ದರು. ಸ್ವಾಭಿಮಾನದ ಹೆಣ್ಣು ಸಿಂಧು ಅದಕ್ಕೊಪ್ಪಲಿಲ್ಲ. ಆ ಹೊತ್ತಿಗೆ ರಘುವಿನ ಪ್ರೇಮದ ನಶೆಯೂ ಇಳಿಯುತ್ತ ಬಂದಿತ್ತೇನೋ. ಹೆಂಡತಿ, ಮಗಳನ್ನು ಅಲ್ಲೇ ಬಿಟ್ಟು ಅಪ್ಪನ ಮನೆ ಬಾಗಿಲು ಬಡಿದರು. ಕದ ತೆರೆದ ಅಪ್ಪ ಮೊದಲು ಕೇಳಿದ ಪ್ರಶ್ನೆ, ‘ನಾನು ಹೇಳಿದ ಹುಡುಗಿಯನ್ನ ಮದುವೆಯಾಗ್ತೀಯಾ?’ ಎಂಬುದಾಗಿತ್ತು.
ಅದಕ್ಕೊಪ್ಪಿದ ರಘುವೀರ್ ಸಿಂಧುವಿನಿಂದ ಸಂಪೂರ್ಣ ದೂರವಾದರು. ತಂದೆ ತೋರಿಸಿದ ಹುಡುಗಿಯ ಕೈಹಿಡಿದರು. ಅಪ್ಪನ ಮನೆಯಲ್ಲಿ ಜಾಗವೂ ಸಿಕ್ಕಿತು. ಆದರೆ ಆ ವೇಳೆಗೆ ಕ್ರಿಯಾಶೀಲತೆಯನ್ನೆ ಕಳೆದುಕೊಂಡು ಜೀವಶವದಂತಾಗಿ ಹೋಗಿದ್ದ ರಘುವೀರ್, ಮಗ ಮರಳಿ ಬಂದ ಖುಷಿಯನ್ನು ಬಹಳ ಕಾಲ ಅನುಭವಿಸುವ ಅವಕಾಶವನ್ನೇ ತಂದೆಗೆ ನೀಡಲಿಲ್ಲ.
ತಮ್ಮೆಲ್ಲ ಮೋಜು ಮಸ್ತಿಗೆ ಸರಿಹೊಂದುವ ಬಳಗವನ್ನು ಬೆನ್ನಿಗಿಟ್ಟುಕೊಂಡು ಅಪ್ಪನ ಆಸ್ತಿ ಕರಗಿಸುವ ಕೆಲಸಕ್ಕೆ ಕೈಹಾಕುವ ರಘುವೀರ್, ಬಹಳ ಕಡಿಮೆ ಅವಧಿಯಲ್ಲಿ ಅದನ್ನು ಮಾಡಿ ಮುಗಿಸುವುದೊಂದು ದುರಂತ. ಅವರ ಈ ಸಾಧನೆ ಅವರ ಸಂಸಾರದ ನೆಮ್ಮದಿಯನ್ನು ಕಸಿಯುತ್ತದೆ. ಆರೋಗ್ಯವನ್ನು ಬಲಿ ಪಡೆಯುತ್ತದೆ. ಮಾಂಬಳ್ಳಿ ಪಾಪಯ್ಯ ತಮ್ಮ ಕೊನೆಯ ದಿನಗಳನ್ನು ನೋವಿನಲ್ಲಿ ಮುಗಿಸುತ್ತಾರೆ. ಸ್ವತಃ ರಘುವೀರ್ ತಮ್ಮೆಲ್ಲ ತಪ್ಪುಗಳಿಗೆ ದಂಡವೇನೋ ಅನ್ನುವಂತೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರು ಎಳೆಯುತ್ತಾರೆ.
ಪಾಪಯ್ಯ ಮಗನ ಮೇಲಿನ ಪ್ರೀತಿಯಿಂದ ದೊಡ್ಡಬಳ್ಳಾಪುರದಲ್ಲಿ ಒಂದು ಎಸ್ಟೇಟ್ ನಿರ್ಮಿಸಿ, ಅದಕ್ಕೆ ‘ರಘುವೀರ್ ಎಸ್ಟೇಟ್’ ಎಂದು ಹೆಸರಿಟ್ಟಿರುತ್ತಾರೆ. ಕೊನೆಗೆ ರಘುವೀರ್ ಮಣ್ಣಾಗಿದ್ದು ಅಪ್ಪನ ಕಣ್ಣ ಕನಸಿನ ಅದೇ ನೆಲದಲ್ಲೇ.
******
ಕುಡಿತ, ಜಗಳ ಮತ್ತು ಮೋಜು
ಸಿಂಧುವಿನಿಂದ ದೂರವಾಗಿ ತಂದೆ ಮನೆ ಸೇರಿದ ರಘುವೀರ್ ಇಲ್ಲಿಯೂ ನೆಮ್ಮದಿಯಾಗಿರಲಿಲ್ಲ, ಜೊತೆಯವರಿಗೂ ನೆಮ್ಮದಿ ಕೊಡಲಿಲ್ಲ. ಸಿಂಧು ಆಕಸ್ಮಿಕವಾಗಿ ಮರಣಿಸಿದ ನಂತರವಂತೂ ಪೂರ್ತಿಯಾಗಿ ಮದಿರೆ – ಮಾನಿನಿ ಸಂಗದಲ್ಲಿ ಮತ್ತರಾಗಿ ಹೋಗಿದ್ದರು ಅನ್ನುತ್ತದೆ ಅವರ ಆಪ್ತವಲಯ. ವಾಪಸು ಬಂದ ಮಗನಿಗೆ ಇನ್ನು ಸಿನೆಮಾ ಸಹವಾಸ ಬೇಡವೆಂದು ರಘುವೀರ್ ತಂದೆ ಹೇಳುತ್ತಾರೆ. ತಮ್ಮ ಗುತ್ತಿಗೆ ಕೆಲಸಗಳಲ್ಲಿ ಜೊತೆಗೈಯಾಗುವಂತೆ ಕೇಳಿಕೊಳ್ಳುತ್ತಾರೆ. ಆದರೆ ರಘುವಿಗೆ ಬಣ್ಣದ ಗುಂಗು ಬಿಟ್ಟಿರುವುದಿಲ್ಲ. ಆತ ಮತ್ತೆ ಸಿನೆಮಾ ಮಾಡುತ್ತೇನೆ ಅಂತ ಹೊರಡುತ್ತಾರೆ, ಆದರೆ ಕರೆದು ಅವಕಾಶ ಕೊಡಲು ಯಾರೂ ಸಿದ್ಧವಿರುವುದಿಲ್ಲ. ಆಗಲೇ ರಘು ಕಂಡವರ ಮೇಲೆಲ್ಲ ಹರಿಹಾಯಲು ಶುರು ಮಾಡುವುದು. ತಾವೇ ನಿರ್ದೇಶಕನ ಪಟ್ಟ ಕಟ್ಟಿದ್ದ ಎಸ್.ನಾರಾಯಣ್ ತಮ್ಮತ್ತ ತಿರುಗಿಯೂ ನೋಡದೆ ಹೋಗುವುದು ರಘುವೀರ್‌ಗೆ ಮಹಾವಿದ್ರೋಹವಾಗಿ ಕಾಣುತ್ತದೆ. ಕಂಡಲ್ಲೆಲ್ಲ, ಕಂಡವರ ಎದುರೆಲ್ಲ ನಾಣಿಯನ್ನು ಬಯ್ಯಲು ಶುರುವಿಡುತ್ತಾರೆ. ಮುಂದೆ ಅವರ ಶತ್ರುಗಳ ಪಟ್ಟಿಯಲ್ಲಿ ಸೇರಿಕೊಳ್ಳುವುದು ಆಪ್ತಮಿತ್ರ ರಾಜು. ನಿರ್ದೇಶಕ ರಾಜುವನ್ನು ಮುಂದಿಟ್ಟುಕೊಂಡು ತಮ್ಮ ಜೀವನ ಕಥೆ ಆಧಾರಿತ ‘ಈ ಪ್ರೀತಿ ಯಾರಿಗೋಸ್ಕರ’ ಸಿನೆಮಾ ಮಾಡಲು ಹೊರಡುತ್ತಾರೆ. ಆದರೆ ನಡುವಲ್ಲೆ ರಾಜು ಜೊತೆ ಜಗಳಾಡಿಕೊಂಡು ಸಿನೆಮಾವನ್ನು ಕೈಬಿಡುತ್ತಾರೆ. ಅದಕ್ಕೆ ಆವರೆಗೆ ಹಾಕಿದ ದುಡ್ಡೂ ಖೋತಾ, ಸಮಯವೂ ವ್ಯರ್ಥ. ರಾಜು ಜೊತೆ ಅದು ಅವರ ಮೊದಲ ಜಗಳವೇನಾಗಿರುವುದಿಲ್ಲ. ಆದರೆ ಈ ಮನಸ್ತಾಪದ ನಂತರ ಅವರೆಂದಿಗೂ ಒಂದಾಗುವುದೇ ಇಲ್ಲ. ಹೀಗೆ ಚಿತ್ರರಂಗದ ಹಲವರೊಡನೆ ರಂಪವಾಡಿ ದ್ವೇಷ ಕಟ್ಟಿಕೊಳ್ಳುವ ರಘುವೀರ್ ಇಲ್ಲೂ ಏಕಾಂಗಿಯಾಗಿ ಉಳಿಯುತ್ತಾರೆ.

ದುರಂತ ಕಾವ್ಯ ~ ತನ್ನೆಲ್ಲ ಸೋಲಿಗೆ ಅವನಿಟ್ಟ ಹೆಸರೇ ‘ಸಿಂಧು’

ಯಾವ ಸಿನೆಮಾ ಕತೆಯೂ ನಾಯಕನ ಮತ್ತೊಂದು ಮುಖವನ್ನು ತೋರಿಸುವುದಿಲ್ಲ. ಒಂದೋ ನೆಗೆಟಿವ್‌ ಶೇಡ್‌ನಲ್ಲಿ ಆತ ಮಿಂಚುತ್ತಾನೆ ಅಥವಾ ಪಾಸಿಟಿವ್ ಶೇಡ್‌ನಲ್ಲಿ. ಈ ಎರಡೂ ಮುಖಗಳ ಸತ್ಯ ದರ್ಶನವಾಗೋದು ರಿಯಲ್‌ ಲೈಫ್‌ನಲ್ಲಿ ಮಾತ್ರ. ರೊಮಾಂಟಿಕ್ ಹೀರೋ ಆಗಿ ಎರಡು ಸೂಪರ್ ಹಿಟ್‌ಗಳನ್ನು ಕೊಟ್ಟಿದ್ದ ರಘುವೀರ್ ನಿಜಬದುಕಲ್ಲಿ ಫ್ಲಾಪ್‌ ಆಗಿಹೋದರು. ಜನರೆದುರು ದುರಂತ ನಾಯಕನಂತೆ ತನ್ನನ್ನು ತಾನು ತೋರಿಸಿಕೊಂಡ ರಘುವೀರ್, ನಟಿ ಸಿಂಧು ಪಾಲಿಗೆ ಖಳನಾಯಕರಾಗಿದ್ದರೇ? ಸಿಂಧು ರಘುವನ್ನು ಗಾಢವಾಗಿ ಪ್ರೀತಿಸಿದ್ದರು. ಆದರೆ ರಘುವೀರ್ ಅವರನ್ನು ಹೇಗೆ ನಡೆಸಿಕೊಂಡರು ಗೊತ್ತೆ? ಸಿಂಧು ಸತ್ತಿದ್ದು ಗುಣವಾಗದ ಸೋಂಕಿನಿಂದ. ರಘು ಕೂಡ ಅವರ ಬದುಕಿಗೆ ತಗುಲಿದ್ದ ಸೋಂಕಾಗಿದ್ದರೇ?
ನಟ ರಘುವೀರ್ ಬದುಕಿನ ಒಳಗನ್ನು ಬಗೆದು ತೋರುವ ‘ದುರಂತ ಕಾವ್ಯ’ ಸರಣಿಯಲ್ಲಿ, ಪತ್ರಿಕೆ ಈ ಬಾರಿ ಅವರ ವಿಫಲ ದಾಂಪತ್ಯದ ಹಲವು ಚಿತ್ರಣಗಳನ್ನು ಓದುಗರ ಮುಂದಿಡುತ್ತಿದೆ….
ನಟ ರಘುವೀರ್‍ ಪಂಚವಾರ್ಷಿಕ ಯೋಜನೆಗೊಮ್ಮೆಯಂತೆ ಸುದ್ದಿಯಾದವರು. ತೊಂಬತ್ತರ ದಶಕದ ಶುರುವಲ್ಲಿ ಎರಡು ಮ್ಯೂಸಿಕಲ್ ಹಿಟ್ ಸಿನೆಮಾಗಳ ಮೂಲಕ ಗೆಲುವಿನ ಖಾತೆ ತೆರೆದಿದ್ದ ಈ ನಟ, ಸಹನಟಿ ಸಿಂಧುವನ್ನು ಮದುವೆಯಾಗಿ ಕೌಟುಂಬಿಕ ವಿರೋಧ ಎದುರಿಸಿ ಸುದ್ದಿಯಾದರು. ಅನಂತರ ಸಾಲು ಸಾಲು ಚಿತ್ರಗಳು ನೆಲಕಚ್ಚುವುದರೊಂದಿಗೆ ದೀರ್ಘಕಾಲದವರೆಗೆ ಮರೆಯಾದರು. ಪ್ರೀತಿಸಿ ಮದುವೆಯಾದವಳಿಗೋಸ್ಕರ ರಘು ತಂದೆ ಮನೆಯನ್ನೇ ತೊರೆದುಹೋದರು ಎಂದು ಜನ ಮೆಚ್ಚಿ ಮಾತಾಡಿಕೊಂಡರು. ರಘುವೀರ್ ಮತ್ತೆ ಸುದ್ದಿಯಾಗಿದ್ದು ಸಿಂಧು ನಿಧನರಾದಾಗ. ಅಲ್ಲೀವರೆಗೆ ಅವರಿಬ್ಬರು ಹೆಚ್ಚೂಕಡಿಮೆ ಮರೆತೇ ಹೋಗಿದ್ದರು. ಅದಾಗಿ ಕೆಲವು ವರ್ಷಗಳ ನಂತರ ರಘು ತಮ್ಮ ಬದುಕಿನ ಕಥೆಯನ್ನೆ ಚಿತ್ರ ಮಾಡುತ್ತೇನೆಂದು ಹೊರಟು ಪತ್ರಿಕೆಗಳಲ್ಲಿ ಕಾಣಿಸಿಕೊಂಡರು. ‘ಈ ಪ್ರೀತಿ ಯಾರಿಗೋಸ್ಕರ?’ ಎಂದು ಹೆಸರಿಟ್ಟು, ವಿವಿ ಪುರಮ್‌ ಕಾಲೇಜಿನ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡು ಸುದ್ದಿಗೋಷ್ಠಿ ನಡೆಸಿದರು. ಆಮೇಲೆ ಅದು ಏನಾಯ್ತು ಅನ್ನೋದು ಬಹುಶಃ ರಘುವೀರ್‌ಗೂ ಗೊತ್ತಿರಲಿಲ್ಲವೇನೋ.
ಇಂಥಾ ರಘುವೀರ್ ಮತ್ತೊಮ್ಮೆ ಸುದ್ದಿಯಾದಾಗ ಅತ್ಯಂತ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದರು. ಮೈಸೂರಿನ ಲಾಡ್ಜ್‌ ಒಂದರಲ್ಲಿ ವೇಶ್ಯೆಯರೊಡನೆ ಪ್ರಣಯದಾಟ ನಡೆಸುವಾಗ ಪೊಲೀಸ್ ರೈಡ್‌ನಲ್ಲಿ ಅರೆಸ್ಟ್ ಆಗಿದ್ದರು ಮತ್ತು ಎರಡು ದಿನಗಳ ಕಾಲ ಜೈಲಿನಲ್ಲಿದ್ದರು ಕೂಡಾ.
ಸಿನೆಮಾ ಗೆದ್ದಿತು, ಬದುಕು…..?
ನಿಜದಲ್ಲಿ ರಘುವೀರ್ ಹೇಳಿಕೊಳ್ಳುವಂಥ ನಟರೇನೂ ಆಗಿರಲಿಲ್ಲ. ದುಡ್ಡು, ಪ್ರಭಾವ ಹಾಗೂ ಅಭಿರುಚಿಗಳು ಅವರ ಬೆನ್ನಿಗಿದ್ದವು. ಗೆದ್ದ ಎರಡೂ ಚಿತ್ರಗಳ ಹಾಡುಗಳೇ ರಘುವನ್ನು ಜನಪ್ರಿಯವಾಗಿಸಿದ್ದು. ಅವರ ಮೂರನೇ ಸಿನೆಮಾ ಶೃಂಗಾರ ಕಾವ್ಯದ ಶೂಟಿಂಗ್‌ ವೇಳೆ ಸಹನಟಿ ಸಿಂಧುವಿನ ಪ್ರೇಮದಲ್ಲಿ ಬಿದ್ದರು ರಘು. ಅದಾಗಲೇ ತಮಿಳಿನಲ್ಲಿ ನಟಿಸಿ ಬಂದಿದ್ದ ಸಿಂಧು ಅಭಿನಯದಲ್ಲಿ, ಪ್ರಬುದ್ಧತೆಯಲ್ಲಿ ಮಾಗಿದ್ದರು. ಹೊಸ ಹೊಡುಗನ ಪ್ರೇಮ ನಿವೇದನೆಗೆ ಹಿಂಜರಿಯುತ್ತಲೇ ಒಪ್ಪಿಕೊಂಡರು. ಆ ಸಿನೆಮಾದ ಕಥೆ ಮತ್ತು ರಘು – ಸಿಂಧು ಜೀವನಗಾಥೆ ಒಂದೇ ಎಳೆಯಲ್ಲಿರುವುದು ಇಂಟರೆಸ್ಟಿಂಗ್. ಆದರೆ ಒಂದು ವ್ಯತ್ಯಾಸ – ಸಿನೆಮಾದಲ್ಲಿ ಸಿಂಧು ಶ್ರೀಮಂತರ ಮನೆ ಹುಡುಗಿ ಮತ್ತು ರಘು ಬಡ ಹುಡುಗ. ವಾಸ್ತವದಲ್ಲಿ ರಘು ಆಗರ್ಭ ಶ್ರೀಮಂತ, ಸಿಂಧು ಸಾಧಾರಣ ಹಿನ್ನೆಲೆಯ ಕುಟುಂಬದಿಂದ ಬಂದವರು. ಸಿನೆಮಾದಲ್ಲಿ ಅವರಿಬ್ಬರ ಪ್ರೇಮಕ್ಕೆ ಗೆಳೆಯರು ಸಹಕರಿಸುತ್ತಾರೆ, ಸಿನೆಮಾ ಸೆಟ್‌ನಲ್ಲಿ ಇಡಿಯ ತಂಡ ಅವರಿಬ್ಬರ ಬೆಸುಗೆಗೆ ಸಹಕಾರ ನೀಡುತ್ತದೆ. ಅವರಿಬ್ಬರು ಜೊತೆಯಲ್ಲಿರಲು ಅನುಕೂಲವಾಗಲೆಂದೇ ಶೂಟಿಂಗ್‌ ಅನ್ನು ಹದಿನೈದು ದಿನ ಹೆಚ್ಚುವರಿ ಎಳೆಯಲಾಗುತ್ತದೆ!
ಸಿನೆಮಾದಲ್ಲಿ ಹುಡುಗಿಯ ಅಪ್ಪ ಅವರ ಮದುವೆಗೆ ಕಡು ವಿರೋಧಿ. ಕದ್ದುಮುಚ್ಚಿ ಮದುವೆಯಾಗುವ ಅವರಿಬ್ಬರು ಬದುಕು ಕಟ್ಟಿಕೊಳ್ಳಲು ಅಣಿಯಾಗುತ್ತಿರುವಾಗಲೇ ಅವಳಿಗೆ ಬ್ರೈನ್ ಟ್ಯೂಮರ್‍ ಅಮರಿಕೊಳ್ಳುತ್ತದೆ. ಸಾವಿನ ದಿನಾಂಕ ನಿಕ್ಕಿಯಾಗುತ್ತದೆ. ಪ್ರೀತಿಸಿ ಮದುವೆಯಾದವಳ ಸಾವಿನೊಂದಿಗೆ ಹುಡುಗ ದುರಂತ ನಾಯಕನಾಗುತ್ತಾನೆ. ಪ್ರೇಕ್ಷಕ ಕಣ್ಣೀರು ಸುರಿಸುವುದರೊಂದಿಗೆ ನಿರ್ಮಾಪಕ, ನಿರ್ದೇಶಕ, ಹಾಡುಗಳನ್ನು ಮುದ್ರಿಸಿ ಹಂಚಿದ ಕ್ಯಸೆಟ್ ಸಂಸ್ಥೆ ಎಲ್ಲರೂ ಲಾಭ ಪಡೆಯುತ್ತಾರೆ. ಈ ಶೃಂಗಾರ ಕಾವ್ಯ `ದುರಂತ ಕಾವ್ಯ’ವಾಗಿ ಪರಿಣಮಿಸುವುದು ಇಬ್ಬರಿಗೆ ಮಾತ್ರ. ಸಿನೆಮಾದ ನಾಯಕ ರಘುವೀರ್‍, ನಾಯಕಿ ಸಿಂಧು ಪಾಲಿಗೆ ಈ ಸಿನೆಮಾದ ಗೆಲುವೇ ಜೀವನದ ಸೋಲಿಗೆ ಮುನ್ನುಡಿ ಬರೆಯುವುದು ವಿಪರ್ಯಾಸ.
ನಾವು ತೆರೆ ಮೇಲೆ ನೋಡುವ ಸಿನೆಮಾದಲ್ಲಿ ಎಲ್ಲವೂ ನೇರ ಮತ್ತು ಸರಳ. ಆದರೆ ಬದುಕು ಸಂಕೀರ್ಣ. ಪ್ರೀತಿ, ಮದುವೆ, ದಾಂಪತ್ಯ, ಅಂತ್ಯ – ಈ ಎಲ್ಲದರ ನಡುವಿನ ವಾಸ್ತವಗಳು ಯಾರ ಗಮನಕ್ಕೂ ಬರುವುದಿಲ್ಲ.
ಸಿಂಧು ಖಳನಾಯಕಿಯೇ!?
ಬೆನ್ನುಬಿದ್ದ ರಘುವೀರ್‌ರನ್ನು ಮದುವೆಯಾದ ಸಿಂಧು ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಗಂಡನ ಕಟುಂಬದ ತಾತ್ಸಾರ, ಆತನ ಸೋಲುಗಳು ಮತ್ತು ಅದರಿಂದ ಉಂಟಾದ ಹತಾಶೆ, ದುಡಿಮೆಯ ಅನಿವಾರ್ಯತೆ, ಮಗಳ ಜವಾಬ್ದಾರಿ, ಕಟ್ಟಿಕೊಂಡವನ ಜೀವವಿಮುಖತೆಯ ಜೊತೆ ಏಗಲಾಗದೆ ಮಾನಸಿಕ ತುಮುಲಗಳು, ಈ ಎಲ್ಲದರ ಜೊತೆ ನಿಜವನ್ನರಿಯದ ಜನರ ಚುಚ್ಚು ಮಾತುಗಳು ಹಾಗೂ ಆರೋಪ. ಸಿಂಧು ಎಲ್ಲವನ್ನೂ ಒಂದು ಹಂತದವರೆಗೆ ಹಲ್ಲು ಕಚ್ಚಿ ಸಹಿಸಿದ್ದರು. ಆದರೆ ಯಾವಾಗ ರಘುವೀರ್‌ ತನ್ನಿಂದ ದುಡಿಮೆ ಮಾಡಲಾಗದೆ, ಅತ್ತ ಹೆಂಡತಿಯನ್ನೂ ಅಭಿನಯಿಸಲು ಕಳಿಸಲಾಗದೆ ರಂಪಾಟಕ್ಕೆ ಶುರುವಿಟ್ಟರೋ ಆಗ ಸಹನೆ ಕಟ್ಟೆಯೊಡೆಯಿತು.
ಬೆಂಗಳೂರಿನ ಅಪ್ಪನ ಮನೆಯಿಂದ ಹೊರತಳ್ಳಿಸಿಕೊಂಡ ರಘುವನ್ನು ಕರೆದುಕೊಂಡು ಸಿಂಧು ಚೆನ್ನೈನತ್ತ ಮುಖ ಮಾಡಿದ್ದರು. ಪ್ರತಿಭಾವಂತೆಯಾಗಿದ್ದ ಆಕೆಗೆ ಅವಕಾಶಗಳು ದೊರೆಯುವುದು ಕಷ್ಟವೇನಾಗಿರಲಿಲ್ಲ. ಒಂದೆರಡು ಸಿನೆಮಾಗಳಲ್ಲಿ ನಟಿಸಿ, ಅನಂತರ ಆದಾಯ ಖಾತ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಲು ಶುರುವಿಟ್ಟರು. ಅಲ್ಲೀವರೆಗೆ ಕೂತುಂಡು ಮಾತ್ರವೇ ಅಭ್ಯಾಸವಿದ್ದ, ಶ್ರೀಮಂತ ಜೀವನಶೈಲಿಗೆ ಒಗ್ಗಿಹೋಗಿದ್ದ ರಘುವೀರ್‍, ಬೆಂಗಳೂರಿಗೆ ಮರಳೋಣವೆಂದು ಹೆಂಡತಿಯನ್ನು ಪೀಡಿಸತೊಡಗಿದರು. ಆದರೆ ಇಲ್ಲಿಗೆ ಬಂದು ಮತ್ತೆ ಅತ್ತೆ ಮಾವನ ಮುಂದೆ ಬೊಗಸೆಯೊಡ್ಡಲು ಸಿಂಧುಗೆ ಸುತರಾಂ ಇಷ್ಟವಿರಲಿಲ್ಲ. ತಾವು ಚೆನ್ನೈ ಬಿಟ್ಟು ಬರುವುದಿಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟರು ಸಿಂಧು. ಅವರು ಒಲ್ಲೆನೆಂದಿದ್ದೇ ಮನಸ್ತಾಪಕ್ಕೆ ಮೂಲವಾಯ್ತು. ಆ ಹೊತ್ತಿಗಾಗಲೇ ಒಬ್ಬ ಮಗಳನ್ನು ಕರುಣಿಸಿದ್ದ ರಘು, ಅವರಿಬ್ಬರನ್ನು ಬಿಟ್ಟು ಬೆಂಗಳೂರಿಗೆ ವಾಪಸಾದರು. ಕೈಕಾಲು ಕಟ್ಟಿ ತಂದೆಯ ಮನೆ ಸೇರಲು ಹವಣಿಸಿದರು.
ಅಲ್ಲಿ ಸಿಂಧು ತಮ್ಮ ಪ್ರತಿಭೆಯನ್ನು ದುಡಿಸಿಕೊಳ್ಳುತ್ತ ಹಲ್ಲುಕಚ್ಚಿ ಬದುಕು ಕಟ್ಟಿಕೊಳ್ಳತೊಡಗಿದ್ದರೆ, ಇಲ್ಲಿ ರಘುವೀರ್‍ “ಅವಳಿಗೆ ತಮಿಳು ಸಿನೆಮಾಗಳಲ್ಲಿ ನಟಿಸುವುದೇ ಮುಖ್ಯವಾಗಿಬಿಟ್ಟಿದೆ. ನನ್ನ ಪ್ರೀತಿಗೆ, ತ್ಯಾಗಕ್ಕೆ ಬೆಲೆಯೇ ಇಲ್ಲವಾಯ್ತು” ಎನ್ನುತ್ತ ಅಳುಮುಂಜಿಯಂತೆ ಓಡಾಡಿದರು. ದುರಂತ ನಾಯಕನ ಮಾತಿಗೆ ಮರುಳಾಗಿದ್ದ ಜನ ಅದನ್ನು ನಂಬಿಕೊಂಡರು ಕೂಡಾ. ದಿನಪೂರ್ತಿ ಕುಡಿದು ತೂರಾಡುತ್ತಲೇ ಇರುತ್ತಿದ್ದ ರಘುವೀರ್‍ ಬಗ್ಗೆ ಅನುಕಂಪ ಹುಟ್ಟಿಕೊಂಡಿತು. ಆತ ತನ್ನ ವೈಫಲ್ಯ, ಮೈಗಳ್ಳತನ, ಕೊರತೆಗಳೆಲ್ಲಕ್ಕೂ ‘ಸಿಂಧು’ ಅನ್ನುವ ಹೆಸರಿಟ್ಟು ಗೋಳಿಡತೊಡಗಿದ. ಆತನ ಸುದ್ದಿ ಬಂದಾಗೆಲ್ಲ ಪ್ರೇಮಿಸಿದ ಹೆಂಡತಿ ಬಿಟ್ಟುಹೋಗಿದ್ದರ ಪರಿಣಾಮದಿಂದ ಹೀಗಾದ ಎಂದೇ ಹೇಳಲಾಗುತ್ತಿತ್ತು.
ಸಿಂಧು ಜೊತೆ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾದಾಗ ಪ್ರೀತಿಗಾಗಿ ಪೋಷಕರನ್ನು, ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಬಿಟ್ಟು ನಡೆದ ರಘುವೀರ್‌ಗಾಗಿ ಜನ ಮರುಗಿದರು.  ಈ ಎಲ್ಲದರ ಹಿಂದೆ ಸಿಂಧು ನರಳಾಟದ ಸದ್ದು ಯಾರಿಗೂ ಕೇಳಿಸಲೇ ಇಲ್ಲ. ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾದ ತಪ್ಪಿಗೆ ಅವರು ಭಾರೀ ಬೆಲೆಯನ್ನೆ ತೆರಬೇಕಾಯ್ತು. ರಘುವೀರ್‌ರನ್ನೇನೋ ಜನ ದುರಂತ ನಾಯಕನೆಂದು ಕರೆಯುತ್ತಾರೆ. ಹಾಗಾದರೆ ಸಿಂಧು ಏನಾಗಿದ್ದರು? ಅವರ ಜೊತೆ ಮನಸ್ತಾಪ ಮಾಡಿಕೊಂಡು ಬೇರೆ ಉಳಿದಿದ್ದ ಖಳನಾಯಕಿಯೇ!? ಆಕೆ ಈ ಎಲ್ಲವನ್ನು ಹೇಗೆ ನಿಭಾಯಿಸಿರಬಹುದು ಎಂದು ಯೋಚಿಸಿದರೆ ಮನಸ್ಸು ಆರ್ದ್ರವಾಗುತ್ತದೆ.
ಎದೆಯ ಸೋಂಕು ಶ್ವಾಸಕ್ಕೂ ತಗುಲಿತು
ಸಿಂಧು ಸಭ್ಯ ಹೆಣ್ಣುಮಗಳೆಂಬ ಮೆಚ್ಚುಗೆ ಪಡೆದ ನಟಿ. ತಮಿಳುನಾಡಿನಲ್ಲಿ ಆಕೆಯ ಬಗ್ಗೆ ಅಗಾಧ ಗೌರವವಿದೆ. ನಟನೆಯ ನಂಟುಳ್ಳ ಸಾಮಾನ್ಯ ಕುಟುಂಬದಿಂದ ಬಂದ ಆಕೆ ಸಮಾಜಮುಖಿಯಾಗಿದ್ದರು. ದಶಕದ ಹಿಂದೆ ಸುನಾಮಿ ಅಪ್ಪಳಿಸಿದಾಗ ಸಾವಿರಾರು ಜನ ಸತ್ತು, ಲಕ್ಷಾಂತರ ಜನ ಮನೆಮಠ ಕಳಕೊಂಡರಲ್ಲ, ಆಗ ಸಿಂಧು ತಮ್ಮ ತಂಡದೊಡನೆ ಸಂತ್ರಸ್ತರಿಗಾಗಿ ನಿಧೀ ಸಂಗ್ರಹಕ್ಕೆ ತೊಡಗಿದರು. ಅಷ್ಟೇ ಅಲ್ಲ, ಸುನಾಮಿ ಪೀಡಿತ ಪ್ರದೇಶಕ್ಕೆ ತೆರಳಿ ಅಲ್ಲಿನ ಜನರ ಸಾಂತ್ವನಕ್ಕೆ ನಿಂತರು. ಅವರ ಈ ಕಳಕಳಿಯೇ ಅವರಿಗೆ ಮುಳುವಾಯ್ತು. ಶ್ವಾಸಕೋಶಕ್ಕೆ ತೀವ್ರವಾದ ಸೋಂಕು ತಗುಲಿ ಅವರ ಜೀವಕ್ಕೆರವಾಯ್ತು.
ಆ ವೇಳೆಗಾಗಲೇ ಗಂಡನಿಂದ ದೂರವಾಗಿ ವರ್ಷಗಳು ಕಳೆದಿದ್ದ ಸಿಂಧು ಸಾಕಷ್ಟು ನೊಂದಿದ್ದರು. ತನ್ನ ಬದುಕು, ನಟನೆಯ ದುಡಿಮೆ ಮತ್ತು ಸಮಾಜ – ಇವಿಷ್ಟನ್ನೆ ತಮ್ಮ ಪ್ರಪಂಚವಾಗಿಸಿಕೊಂಡಿದ್ದರು. ಅವರು ರಘುವೀರ್ ಜೊತೆ ಬೆಂಗಳೂರಿಗೆ ಮರಳದೆ ಇದ್ದುದಕ್ಕೆ ಅವರ ಸ್ವಾಭಿಮಾನ ಹಾಗೂ ಅದಕ್ಕೂ ಮುನ್ನ ಗಂಡನ ಕುಟುಂಬದಿಂದ ಅನುಭವಿಸಿದ್ದ ತಿರಸ್ಕಾರಗಳು ಕಾರಣವಾಗಿದ್ದವೇ ಹೊರತು ರಘು ಮೇಲಿನ ಬೇಸರವಲ್ಲ. ಒಂದಲ್ಲ ಒಮ್ಮೆ ಆತ ತನಗಾಗಿ ಮರಳುತ್ತಾನೆಂದು ಅವರು ಕಾದಿದ್ದರು. ಆದರೆ ಯಾವಾಗ ರಘು ಸಿಂಧುವನ್ನು ದೂರಿಕೊಂಡು ತಂದೆ ಮನೆಗೆ ಹತ್ತಿರವಾಗತೊಡಗಿದರೋ ಅವರಿಗೆ ಆತ ಬದಲಾಗಿದ್ದಾನೆಂದು ಖಚಿತವಾಗಿತ್ತು. ತನ್ನ ಕಷ್ಟದ ದಿನಗಳಲ್ಲೂ ಆತ ತಿರುಗಿ ನೋಡದೆ ಇದ್ದುದು, ಮಗಳನ್ನು ಕನಿಷ್ಠ ನೆನೆಸಿಕೊಳ್ತಲೂ ಇರದಿದ್ದುದು ಆಕೆಯಲ್ಲಿ ಎದೆಗುದಿ ಮೂಡಿಸಿತ್ತು. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಮಾಜಮುಖಿಯಾಗುತ್ತ, ಜನರ ನೋವಿಗೆ ಮದ್ದಾಗುವಲ್ಲಿ ಸಮಾಧಾನ ಕಂಡುಕೊಳ್ಳತೊಡಗಿದರು. ಅವರ ಎದೆಗಂಟಿದ್ದ ಸೋಂಕು ಮಾಯುತ್ತಿದೆ ಅನ್ನುವಾಗಲೇ ಅದು ಶ್ವಾಸಕ್ಕೆ ರವಾನೆಯಾಗಿತ್ತು.
ಹೃದಯಕ್ಕಾದ ಹುಣ್ಣು ಜೀವನ ಕಸಿದಿತ್ತು, ಶ್ವಾಸಕೋಶದ ಹುಣ್ಣು ಜೀವವನ್ನೇ ಕಸಿದುಕೊಂಡಿತು.
ಆ ಹೆಣ್ಣುಮಗಳು ಒಂಟಿಯಾಗಿ ಈ ಎಲ್ಲವನ್ನೂ ಹಾದುಹೋಗುತ್ತಿರುವಾಗ ರಘುವೀರ್‍ ಬೆಂಗಳೂರಿನಲ್ಲಿ ತಮ್ಮ ಗೆಳೆಯರ ದಂಡಿನ ಜೊತೆ ಕುಡಿತದ ಮೋಜಿನಲ್ಲಿರುತ್ತಿದ್ದರು. ಆಕೆ ಸಾಯುವ ಹಂತದಲ್ಲೂ ಒಮ್ಮೆ ನೋಡಬೇಕು ಎನ್ನಿಸುವುದಿಲ್ಲ ಆತನಿಗೆ.
ಈ ಎಲ್ಲದರಿಂದ ಅಸಹ್ಯಪಟ್ಟುಕೊಂಡ ಸಿಂಧು, ರಘುವೀರ್‌ಗೆ ತನ್ನ ಶವವನ್ನೂ ನೋಡಲು ಬಿಡಕೂಡದು ಎಂದು ಪತ್ರ ಬರೆದಿಡುತ್ತಾರೆ. ತಾನು ಆತನನ್ನು ನೋಡುವುದಿರಲಿ, ಆತ ತನ್ನ ಹೆಣ ನೋಡುವುದು ಕೂಡ ಅಸಹನೀಯ ಎನ್ನುವ ಮಟ್ಟಕ್ಕೆ ಅವರ ಮನಸ್ಸು ರೋಸಿ ಹೋಗುತ್ತದೆ. ಅಂತೆಯೇ ಸಿಂಧು ಸತ್ತಾಗ ಆಕೆಯ ಕುಟುಂಬ ರಘುವೀರ್‌ಗೆ ಅಂತಿಮ ದರ್ಶನ ನಿರಾಕರಿಸುತ್ತದೆ. ಮಗಳು ಕೂಡ ಅಮ್ಮನ ಬಾಳನ್ನು ಕೊಂದ ಅಪ್ಪನನ್ನು ನೋಡಲು ಬಯಸುವುದಿಲ್ಲ.
ಈ ಸ್ವಯಂಕೃತ ಆಘಾತಗಳಿಂದ ಮೂರ್ಛೆ ರೋಗಕ್ಕೆ ತುತ್ತಾಗುವ ರಘುವಿನ ಮದ್ಯ ವ್ಯಸನಕ್ಕೆ, ಮತ್ತೊಂದು ನೆವ ಹೊಸತಾಗಿ ಸೇರಿಕೊಳ್ಳುತ್ತದೆ.

ದುರಂತ ಕಾವ್ಯ ~ ನಟ – ನಿರ್ದೇಶಕ ರಘುವೀರ ಬದುಕು, ಬವಣೆ

ಆತನಿಗೆ ಮೂರ್ಛೆ ರೋಗವಿತ್ತು. ಕುಡಿತದ ವ್ಯಸನವಿತ್ತು. ಸತ್ತರೂ ಮಗ ನೋಡಲು ಬರುವುದು ಬೇಡವೆಂಬ ತಂದೆಯ ತಿರಸ್ಕಾರವಿತ್ತು. ಒಮ್ಮೆ ಹೊಸ್ತಿಲು ದಾಟಿ ನಡೆದ ಮೇಲೆ ಮತ್ತೆಂದೂ ಹಿಂತಿರುಗಿ ನೋಡದಷ್ಟು ಮೊದಲ ಹೆಂಡತಿಯ ತಾತ್ಸಾರವಿತ್ತು. ಬದುಕಿನಲ್ಲಿ ಒಂದು ಸೋಲನ್ನು, ಒಂದು ರೋಗವನ್ನು, ಒಂದು ವ್ಯಸನವನ್ನು ನಿಭಾಯಿಸಿಕೊಳ್ಳದೆ ಹೋದ ನಟ ರಘುವೀರ್ ಒಬ್ಬ ದುರಂತ ನಾಯಕನಾಗಿ ಕಾಣುತ್ತಾರೆ. ಅವರ ದೇಹಕ್ಕಲ್ಲ, ಅವರ ಪ್ರಜ್ಞೆಗೇ ಮೂರ್ಛೆ ಬಡಿದವರಂತೆ ಬದುಕಿದ್ದರು ರಘುವೀರ್. ಶ್ರೀಮಂತ, ಪ್ರಭಾವಿ ತಂದೆಯ ಮಗನಾಗಿದ್ದುಕೊಂಡು ಕುಡಿತಕ್ಕೆ ನೂರು ರೂಪಾಯಿ ಸಾಲ ಕೇಳುವ ಮಟ್ಟಕ್ಕೆ ತಮ್ಮ ಬದುಕನ್ನು ತಂದುಕೊಂಡಿದ್ದರು. ಮೈಸೂರಿನ ಲಾಡ್ಜ್ ಒಂದರಲ್ಲಿ ವೇಶ್ಯೆಯರೊಂದಿಗೆ ಶೃಂಗಾರ ಲೀಲೆಯಲ್ಲಿರುವಾಗ ಸಿಕ್ಕುಬಿದ್ದಿದ್ದರು. ಒಂದು ಕಾಲದ ಈ ಜನಪ್ರಿಯ ನಟನನ್ನು ಜನ ನೆನಪಿಸಿಕೊಳ್ಳಲೂ ಆಗದಷ್ಟು ವಿಫಲ ಜೀವನವನ್ನು ಬದುಕಿದರು ರಘುವೀರ್. ಹಾಗಾದರೆ ಒಂದು ಸೋಲಿಗೆ, ಒಂದು ರೋಗಕ್ಕೆ ಮನುಷ್ಯನನ್ನು ಈ ಪರಿ ಪತನಕ್ಕಿಳಿಸುವ ತಾಕತ್ತಿದೆಯಾ? ಒಂದು ಗೆಲುವನ್ನು, ಒಂದು ವ್ಯಸನವನ್ನು ನಿಭಾಯಿಸಿಕೊಳ್ಳಲಾಗದೆ ಹೋದರಾ ರಘುವೀರ್? ಅಥವಾ ಇಂತಹ ದುರಂತ ಚಿತ್ರರಂಗದ ಹಿನ್ನೆಲೆಯಿಂದಲೆ ಒದಗಿಬಂದಿದ್ದಾ? ಅವರ ಅಕಾಲಿಕ ನಿಧನಕ್ಕೆ ಕಾರಣವಾಗಿದ್ದು ಯಾರು? ಅವರ ಬದುಕಲ್ಲಿ ಮುಳ್ಳಾಗಿ ಬಂದಿದ್ದು ಯಾರು?
ಈ ಎಲ್ಲ ವಿಷಯಗಳ ಒಳಗನ್ನು ಬಗೆದು ‘ಪತ್ರಿಕೆ’ ಹಲವು ಕಂತುಗಳಲ್ಲಿ ತನ್ನ ಓದುಗರ ಮುಂದಿಡಲಿದೆ. ಈ ನಟನ ಸಿನೆಮಾ ಅಷ್ಟೇ ಶೃಂಗಾರ ಕಾವ್ಯ, ನಾವು ಈ ಮಾಲಿಕೆಗಿಟ್ಟ ಹೆಸರು ‘ದುರಂತ ಕಾವ್ಯ’.

ಒಂದು ಕಾಲದಲ್ಲಿ ಸಾಕಷ್ಟು ಮಿಂಚಿದ್ದ ನಾಯಕನೊಬ್ಬ ನಿಧನನಾಗುತ್ತಾನೆ. ಆತ ನಟಿಸಿದ ಚಿತ್ರಗಳಲ್ಲಿ ಎರಡು ಚಿತ್ರಗಳು ಜೀವಮಾನದ ಸಾಧನೆ ಅನ್ನುವಷ್ಟು ಹೆಸರು ಮಾಡಿದಂಥವು. “ಕೈಲಿ ನಡೆಯೋ ಕಾಲ ಕೈಗೊಬ್ಬ ಕಾಲ್ಗೊಬ್ಬ…” ಅನ್ನುವಂತೆ ಆತ ಸುಸ್ಥಿತಿಯಲ್ಲಿದ್ದಷ್ಟು ದಿನ ಆತನ ಸುತ್ತಮುತ್ತ ಗುಂಪು ನೆರೆದಿರುತ್ತಿತ್ತು. ಇಂತಹಾ ಹೀರೋನ ಅಂತಿಮ ದರ್ಶನಕ್ಕೆ ಬಂದಿದ್ದ ಜನರೆಷ್ಟು ಗೊತ್ತೆ? ಕೇವಲ ಬೆರಳೆಣಿಕೆಯಷ್ಟು ಮಂದಿ. ಅದು ಕೂಡ ಚಿತ್ರ ರಂಗದವರಲ್ಲ.
ಬದುಕು ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಎರಡು ವೈಪರೀತ್ಯಗಳಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ರಘುವೀರ್. ರಘುವೀರ್‌ಗೆ ಜೀವನದಲ್ಲಿ ಎಲ್ಲವೂ ಇತ್ತು. ತಂದೆ ಮಾಡಿಟ್ಟ ಕೋಟ್ಯಂತರ ರೂಪಾಯಿ ಆಸ್ತಿ ಇತ್ತು. ಪ್ರತಿಭೆಯೂ ಇತ್ತು. ಖ್ಯಾತಿ ಅವರನ್ನು ಹಿಂಬಾಲಿಸಿ ಬಂದಿತ್ತು. ಕನ್ನಡದ ಮಟ್ಟಿಗೆ ನಾಯಕನಾಗಿ ಗೆಲ್ಲುವುದಕ್ಕೆ ಅಂದ ಚೆಂದ, ಮೈಕಟ್ಟುಗಳೇ ಮುಖ್ಯವಲ್ಲ ಅನ್ನುವುದನ್ನು ರಘುವೀರ್ ತೋರಿಸಿಕೊಟ್ಟಿದ್ದರು. ಅವರ ಆರಂಭದ ಎರಡೂ ಚಿತ್ರಗಳು ಮ್ಯೂಸಿಕಲ್ ಹಿಟ್ ಆಗಿದ್ದು ಮಾತ್ರವಲ್ಲದೆ, ರಘು ಅಭಿನಯವೂ ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ತಮ್ಮ ಅಭಿರುಚಿಯಿಂದ ಉತ್ತಮ ಚಿತ್ರಗಳನ್ನು ಮಾಡಿದ ರಘುವೀರ್, ಸ್ಯಾಂಡಲ್‌ವುಡ್‌ಗೆ ಇಬ್ಬರು ಅತ್ಯುತ್ತಮ ರಿಮೇಕ್ ನಿರ್ದೇಶಕರನ್ನು ಪರಿಚಯಿಸಿದರು. ಇಷ್ಟೆಲ್ಲ ಹಿನ್ನೆಲೆಯಿದ್ದರೂ ಅವರು ನಿಧನರಾದಾಗ ಸ್ಯಾಂಡಲ್‌ವುಡ್ ದಿವ್ಯ ನಿರ್ಲಕ್ಷ್ಯ ತೋರಿಸಿದ್ದು ಯಾಕೆ? ಪ್ರಶ್ನೆ ಉಳಿದುಹೋಗುತ್ತದೆ.

ಮುಳ್ಳಾಗಿದ್ದು ಯಾರು?
“ನನ್ನವರೇ ನನಗೆ ಕೊನೆಗೆ ಮುಳ್ಳಾದರೆ…” ಹಾಡು ರಘುವೀರ್ ಅವರ ಜೀವನಕ್ಕೆ ಬಹಳ ಹತ್ತಿರವಾಗಿತ್ತು. ಆದರೆ ನಿಜಕ್ಕೂ ರಘುವೀರ್ ಬದುಕಿಗೆ ಮುಳ್ಳಾಗಿದ್ದು ಯಾರು? ತಮಗಿಷ್ಟವಿಲ್ಲದ ಮದುವೆಯ ಕಾರಣದಿಂದ ಮಗನನ್ನು ಮನೆಯಾಚೆ ದೂಡಿದ ಅಪ್ಪನ ಮೊಂಡುಹಟವಾ? ಬಂದಷ್ಟೇ ಶೀಘ್ರವಾಗಿ ಕಳೆದೂ ಹೋದ ಜನಪ್ರಿಯತೆಯಾ? ಪ್ರೀತಿಸಿ ಮದುವೆಯಾದವಳ ಜೊತೆಗಿನ ಮನಸ್ತಾಪವಾ? ದೂರವಿದ್ದರೂ ಅಳಿಯದ ಆಕೆಯ ಮೇಲಿನ ಪ್ರೀತಿಯಾ ಮತ್ತು ಅವಳ ಅಕಾಲಿಕ ಸಾವಾ? ಒಂದು ದೃಷ್ಟಿಯಿಂದ ನೋಡಿದರೆ ಅವೆಲ್ಲವೂ ಹೌದು. ಆದರೆ ವಾಸ್ತವ ದೃಷ್ಟಿಯಿಂದ ನೋಡಿದರೆ ಅದಾವುದೂ ಅಲ್ಲ. ರಘುವೀರ್ ಸುತ್ತ ಇದ್ದವರು ಹೇಳುವಂತೆ ಅವರದು ಸ್ವಯಂಕೃತಾಪರಾಧ.
ರಘುವೀರ್ ತಂದೆ ಮಾಂಬಳ್ಳಿ ಪಾಪಯ್ಯ ಒಂದು ಕಾಲದಲ್ಲಿ ಬೆಂಗಳೂರಿನ ಖ್ಯಾತ ಕಂಟ್ರಾಕ್ಟರ್ ಆಗಿದ್ದವರು. ಸಾಕಷ್ಟು ಪ್ರಭಾವಿ ವ್ಯಕ್ತಿತ್ವದವರು. ಬಿಎಮ್‌ಟಿಸಿ ನಿಲ್ದಾಣ ಕಟ್ಟಿಸಿದ್ದು, ನಗರದ ಪ್ರತಿಷ್ಠಿತ ಚೌಡಯ್ಯ ಸಭಾಂಗಣವನ್ನು ಕಟ್ಟಿಸಿದ್ದು ಅವರೇ. ಕೋಟ್ಯಧೀಶ್ವರರಾಗಿದ್ದ ಅವರು ಮಗನಿಗೆ ಎಲ್ಲ ಸವಲತ್ತು ಸ್ವಾತಂತ್ರ್ಯಗಳನ್ನು ನೀಡಿದ್ದರು. ಮಾದರೆ ಮದುವೆಯ ವಿಚಾರದಲ್ಲಿ ಮಾತ್ರ ಅವರದು ಬಿಡದ ಹಟವಾಗಿತ್ತು. ತಮ್ಮ ಅಕ್ಕನ ಮಗಳನ್ನು ರಘುವಿಗೆ ತಂದುಕೊಳ್ಳುವುದೆಂದು ಅವರು ಮೊದಲೇ ನಿಶ್ಚಯ ಮಾಡಿದ್ದರು. ಆದರೆ ಆತ ಅದಕ್ಕೆ ವಿರುದ್ಧವಾಗಿ ನಡೆದಾಗ ಉಂಟಾದ ಆಘಾತದಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ.
ಎಂಥ ವಿಚಿತ್ರ ನೋಡಿ! ರಘುವೀರ ಅನ್ನೋದು ರಾಮನ ಹೆಸರು. ತಾವು ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯಕ್ಕೆ ಮಗ ವಾರಸುದಾರನಾಗುತ್ತಾನೆ, ತನ್ನ ಕುಲದೀಪಕನಾಗುತ್ತಾನೆ ಎಂದು ಪಾಪಯ್ಯನವರು ಆ ಹೆಸರನ್ನಿಟ್ಟಿದ್ದರೇನೋ. ಆದರೆ ರಘುವೀರ್ ತನ್ನ ಕುಲವನ್ನೆ ನಾಶದ ಅಂಚಿಗೊಯ್ದರು. ಕುಡಿತದ ಹುಚ್ಚು, ದುಡಿಮೆಯ ಆಲಸ್ಯಗಳಿಂದ ಸಾಲಗಾರರಾದರು. ಅಷ್ಟು ದೊಡ್ಡ ಕಂಟ್ರಾಕ್ಟರರ ಮಗ ತಮ್ಮ ಕೊನೆಯ ವರ್ಷಗಳನ್ನು ಕಳೆದಿದ್ದು ಸಂಪಂಗಿರಾಮ ನಗರದ ಬಾಡಿಗೆ ಮನೆಯೊಂದರಲ್ಲಿ ಅಂದರೆ ನೀವು ನಂಬಲೇಬೇಕು.
ಇಂತಹ ಮಗ ತಾನು ಸತ್ತರೂ ತನ್ನನ್ನು ನೋಡಲು ಬರುವುದು ಬೇಡವೆಂದು ಅವರ ತಂದೆ ತಾಕೀತು ಮಾಡಿದ್ದರು. ಅತ್ತ ರಘುವೀರ್ ಜೊತೆ ಬಾಳಲಾಗದೆ ಬಿಟ್ಟು ಹೋದ ಸಿಂಧೂ ಮಡಿದಾಗಲೂ ಇದೇ ಕಥೆ. ಆಕೆಯ ಸಂಬಂಧಿಕರು ಆಕೆಯ ಕಳೇವರ ನೋಡಲು ಬರದಂತೆ ರಘುವೀರ್‌ರನ್ನು ತಡೆದು ನಿಂತರು. ಅವರು ತಮಗಾಗಿ ಬದುಕು ಸವೆಸಿದವರನ್ನು ಹೇಗೆ ನಡೆಸಿಕೊಂಡಿದ್ದರು ಅನ್ನುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿ ನಿಲ್ಲುತ್ತವೆ. ರಘುವೀರ್ ಸತ್ತಾಗ ನೋಡಲು ಹೋದವರ ಸಂಖ್ಯೆ ಅವರು ತಮ್ಮ ಸುತ್ತಲಿನವರ ಜೊತೆ ಹೇಗೆ ನಡೆದುಕೊಂಡಿದ್ದರು ಅನ್ನೋದನ್ನ ಸೂಚಿಸುತ್ತದೆ. ಅವರ ಆಪ್ತ ಗೆಳೆಯರೊಬ್ಬರು ಸಾವಿನ ಮನೆಯಲ್ಲಿ ನಿಂತುಕೊಂಡೇ “ಯಾವಾಗ ಎದುರಾದರೂ ನೂರು ರೂಪಾಯಿ ಕೇಳುತ್ತಿದ್ದ. ದಿನವಿಡೀ ಕುಡಿಯುತ್ತ ಕೂರುತ್ತಿದ್ದ” ಎಂದಿದ್ದು ಕೇಳಿದರೆ, ಯಾರಿಗೆ ಯಾರು ಮುಳ್ಳಾದವರು ಅನ್ನೋದು ಸ್ಪಷ್ಟವಾಗುತ್ತದೆ.

ಮುಗಿಲ ಚುಂಬಿಸಿದವನು…
ಬಹುತೇಕರು ಅಂದುಕೊಂಡಿರುವಂತೆ ರಘುವೀರ್ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ ಅಲ್ಲ. ಅಜಯ್ ವಿಜಯ್ ಅವರ ಅಭಿನಯದ ಮೊದಲ ಚಿತ್ರ. ಚೈತ್ರದ ಪ್ರೇಮಾಂಜಲಿ ತನ್ನ ಹಾಡುಗಳಿಂದಲೇ ಸೂಪರ್ ಹಿಟ್ ಆಯಿತು. ಅದರ ಚುಂಗು ಹಿಡಿದು ರಘುವೀರ್ ಶೃಂಗಾರ ಕಾವ್ಯ ಚಿತ್ರದಲ್ಲಿ ನಟಿಸಿದರು. ಈ ಸಿನೆಮಾ ಕೂಡ ಗೆಲ್ಲುವುದರೊಂದಿಗೆ ಕನ್ನಡದಲ್ಲಿ ಹೊಸ ಅಲೆ ಹುಟ್ಟು ಹಾಕಿದರು ರಘು. ನಟನೆ ಹಾಗೂ ಚಿತ್ರರಂಗಕ್ಕೆ ಪೂರಕವಾದ ಕೌಶಲ್ಯಗಳು ಇದ್ದರೆ ಸಾಕು, ಎಂಥವರೂ ಹೀರೋ ಆಗಿ ಯಶಸ್ಸು ಪಡೆಯಬಹುದು ಎಂದು ಸಾಬೀತುಪಡಿಸಿದ್ದರು. ಈ ಅಲೆಯಲ್ಲೆ ತೇಲುತ್ತ ತಮ್ಮ ಸಹನಟಿ ಸಿಂಧೂ ಅವರನ್ನು ಪ್ರೀತಿಸಿ ಮದುವೆಯೂ ಆದರು. ಆದರೆ ಅಲ್ಲಿಂದ ಅವರ ಬದುಕು ಮಗ್ಗಲು ಬದಲಿಸಿತು. ಅಲ್ಲಿಯವರೆಗೆ ಬದುಕಿನ ಗ್ರಾಫಿನಲ್ಲಿ ಬರಿ ಏರಿಕೆಯನ್ನೆ ಕಂಡಿದ್ದ ರಘುವೀರ್ ಈಗ ಪತನದ ಹಾದಿ ಹಿಡಿದಿದ್ದರು. ಶೃಂಗಾರ ಕಾವ್ಯದ ನಂತರ ಅವರ ಒಂದೇ ಒಂದು ಸಿನೆಮಾ ಕೂಡ ಹಿಟ್‌ಲಿಸ್ಟ್ ಸೇರಲಿಲ್ಲ. ಮನೆಯವರನ್ನು ಎದುರು ಹಾಕಿಕೊಂಡು ಸಿಂಧೂ ಅವರನ್ನು ಮದುವೆಯಾಗಿದ್ದರೂ ಆ ಪ್ರತಿಭಾವಂತ ನಟಿಯನ್ನು ಬಾಳಿಸಲಿಲ್ಲ. ರಘುವೀರ್‌ರೊಂದಿಗೆ ಸಂಸಾರ ನಡೆಸಲಾಗದೆ ಸಿಂಧೂ ಅವರನ್ನು ಬಿಟ್ಟು ನಡೆದರು. ತಮಿಳು ಚಿತ್ರ ರಂಗದಲ್ಲಿ ನೆಲೆ ಕಂಡುಕೊಂಡಿದ್ದರು. ಅವರ ದಾಂಪತ್ಯದ ಕುರುಹಾಗಿ ಅವರಿಗೊಂದು ಹೆಣ್ಣು ಮಗುವೂ ಇದೆ. ಆದರೆ ರಘುವೀರ್ ಬದುಕಿದ್ದಷ್ಟೂ ದಿನ ಆ ಮಗಳು ತಂದೆಯ ಮುಖ ನೋಡಲು ಬಯಸಿರಲಿಲ್ಲ ಅನ್ನುವುದು ಕೇಳಿದರೆ ಅಚ್ಚರಿಯಾಗುತ್ತದೆ.
ಸುನಾಮಿ ಬಂದೆರಗಿದ ಸಂದರ್ಭದಲ್ಲಿ ಸಿಂಧೂ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ಅವರ ಶುಶ್ರೂಷೆಯ ವೇಳೆ ಸೋಂಕು ತಗಲಿ, ಗುಣ ಕಾಣದೆ ಅಸುನೀಗಿದರು. ಸಿಂಧೂ ಮರಣದ ನಂತರ ಕುಗ್ಗಿಹೋಗಿದ್ದ ರಘುವೀರ್ ಮದ್ಯವ್ಯಸನಿಯಾದರು. ಹಗಲಿರುಳೆನ್ನದೆ ಕುಡಿಯುತ್ತ ಯಾವ ಚಟುವಟಿಕೆಯೂ ಇಲ್ಲದೆ ತಮ್ಮನ್ನು ತಾವೆ ಕೊಂದುಕೊಳ್ಳತೊಡಗಿದ್ದರು. ಆದರೆ ಹೆಚ್ಚು ಕಾಲ ಅವರಿಂದ ಒಂಟಿಯಾಗಿರುವುದು ಸಾಧ್ಯವಾಗಲಿಲ್ಲ. ತಮ್ಮ ಸಂಬಂಧಿಕರಲ್ಲೆ ಒಬ್ಬರನ್ನು ಮದುವೆಯಾಗಿ ದಾಂಪತ್ಯ ನಡೆಸಿದ ರಘುವಿಗೆ ಆಕೆಯಿಂದಲೂ ಒಂದು ಹೆಣ್ಣು ಮಗುವಿದೆ.
ಮತ್ತೆ ಬಣ್ಣದ ಸೆಳೆತಕ್ಕೆ ಒಳಗಾದ ರಘುವೀರ್ ಉಯ್ಯಾಲೆ, ಮುಗಿಲ ಚುಂಬನ ಎಂಬ ಚಿತ್ರಗಳಲ್ಲಿ ನಟಿಸಿದರು. ಒಂದು ಸುದೀರ್ಘ ಕಾಲದವರೆಗೆ ಹೊರಗೆಲ್ಲೂ ಹೋಗದೆ, ಜನರ ನಡುವೆ ಬೆರೆಯದೆ ಕಳೆದುಹೋದಂತಿದ್ದ ರಘುವೀರ್ ಮುಗಿಲ ಚುಂಬನ ಚಿತ್ರದ ಮೇಲೆ ಅಪಾರ ಭರವಸೆ ಇರಿಸಿಕೊಂಡಿದ್ದರು. ಆದರೆ ಚಿತ್ರ ಮಖಾಡೆ ಮಲಗಿತು. ಇದರೊಂದಿಗೆ ರಘು ಮತ್ತಷ್ಟು ಅಂತರ್ಮುಖಿಯಾದರು.
ಈ ನಡುವೆ ರಘುವೀರ್ ಮತ್ತೊಂದು ಅನಾಹುತ ಮಾಡಿಕೊಂಡಿದ್ದರು. ಯಾವಾಗಲೂ ಕುಡಿತದ ಮತ್ತಿನಲ್ಲೆ ಇರುತ್ತಿದ್ದ ಅವರು ಮೈಸೂರಿನ ಲಾಡ್ಜ್ ಒಂದರಲ್ಲಿ ವೇಶ್ಯೆಯರೊಂದಿಗೆ ಸಿಕ್ಕಿಬಿದ್ದಿದ್ದರು. ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಫೈವ್ ಲೈಟ್ ವೃತ್ತದ ಬಳಿ ಇರುವ ಅಭಿಷೇಕ್ ಹೆಸರಿನ ಲಾಡ್ಜ್ ನಲ್ಲಿ ರಘು ಮತ್ತವರ ಸ್ನೇಹಿತರು ಉಳಿದುಕೊಂಡಿದ್ದರು. ಕುಡಿತದ ನಶೆ, ವೇಶ್ಯೆಯರ ಸಂಗದಲ್ಲಿ ಮೈಮರೆತ್ತಿದ್ದ ಈ ಗುಂಪನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ಕಳುಹಿಸಿದ್ದರು.

***
ಈ ಪ್ರೀತಿ ಯಾರಿಗೋಸ್ಕರ!?
ಯಾವ ಸಿನೆಮಾ ಕತೆಯೂ ನಾಯಕನ ಮತ್ತೊಂದು ಮುಖವನ್ನು ತೋರಿಸುವುದಿಲ್ಲ. ಒಂದೋ ನೆಗೆಟಿವ್ ಶೆಡ್‌ನಲ್ಲಿ ಆತ ಮಿಂಚುತ್ತಾನೆ ಅಥವಾ ಪಾಸಿಟಿವ್ ಶೇಡ್‌ನಲ್ಲಿ. ಈ ಎರಡೂ ಮುಖಗಳ ಸತ್ಯ ದರ್ಶನವಾಗೋದು ರಿಯಲ್ ಲೈಫ್‌ನಲ್ಲಿ ಮಾತ್ರ. ಹೀಗೆ ನಿಜ ಜೀವನದಲ್ಲಿ ತನ್ನ ಮುಖವನ್ನೇ ನೋಡಿಕೊಂಡು ಬದುಕಿನ ಏರಿಳಿತಗಳ ವಿಮರ್ಶೆ ಮಾಡಿಕೊಂಡಿದ್ದ ರಘುವೀರ್, ತಮ್ಮ ಬದುಕನ್ನೆ ಸಿನೆಮಾ ಮಾಡಲು ಹೊರಟಿದ್ದರು. ತಮ್ಮ ಜೀವನ ಕತೆಯನ್ನಿಟ್ಟುಕೊಂಡು ‘ಈ ಪ್ರೀತಿ ಯಾರಿಗೋಸ್ಕರ?’ ಅನ್ನುವ ಸಿನೆಮಾ ಮಾಡುವ ಯೋಜನೆ ಹಾಕಿಕೊಂಡಿದ್ದರು ರಘುವೀರ್. ತಮ್ಮ ಬದುಕಿನ ದುರಂತಗಳಿಗೂ ತಮ್ಮ ಪ್ರೇಮ ವಿವಾಹಕ್ಕೂ ತಳಕು ಹಾಕಿಕೊಂಡಿದ್ದ ಅವರು, ಮದುವೆಯ ನಂತರದ ತಮ್ಮ ಪ್ರತಿಯೊಂದು ಏಳುಬೀಳಿಗೂ ಅದೇ ಕಾರಣವೆಂದು ಬಲವಾಗಿ ನಂಬಿದ್ದರು. ಹೀಗಾಗಿಯೇ ಅದರಿಂದ ಹೊರ ಬರುವ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿರಲಿಲ್ಲ.
ರಘುವೀರ್ ಆರಂಭದ ದಿನಗಳಲ್ಲಿ ಇದ್ದ ಬಗೆಯೇ ಬೇರೆ. ಶ್ರೀಮಂತರ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ಚಿತ್ರವಿಚಿತ್ರ ಶೋಕಿಗಳಾವುವೂ ಅವರಿಗೆ ಇರಲಿಲ್ಲ. ತನ್ನ ಜೊತೆ ಕೆಲಸ ಮಾಡುವವರ ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು. ಆದರೆ ವೈಯಕ್ತಿಕ ಬದುಕಿನ ವೈಫಲ್ಯದ ಜೊತೆಜೊತೆಗೆ ನಂಬಿದ ಸಿನಿಮಾ ವೃತ್ತಿ ಕೈಹಿಡಿಯದೇ ಇದ್ದಾಗ ವಿಪರೀತ ಹತಾಶೆಗೆ ಒಳಗಾಗಿಬಿಟ್ಟರು. ತನ್ನ ತಂದೆಯ ಥರ ಬಿಲ್ಡರ್ ಆಗುವುದಕ್ಕೆ ಹೊರಟರು. ಆದರೂ ಬಣ್ಣದ ಸೆಳೆತ ಬಿಡದೆ ‘ಮುಗಿಲ ಚುಂಬನ’ಕ್ಕೆ ಕೈಹಾಕಿದರು. ಯಾರೋ ನಿರ್ದೇಶಿಸಬೇಕಾಗಿದ್ದ ಚಿತ್ರವನ್ನು ತಾವೇ ನಿರ್ದೇಶಿಸಬೇಕಾದ ಸಂದರ್ಭ ಬಂತು. ಹಣಕಾಸಿನ ತೊಂದರೆಯಿಂದ ಚಿತ್ರದ ಶೂಟಿಂಗ್ ತಡವಾಯಿತು. ಹೀಗೆ ತಯಾರಾದ ಚಿತ್ರ ಬಿಡುಗಡೆಗೆ ಮೊದಲೇ ಸೋತು ನೆಲ ಕಚ್ಚಿತ್ತು. ರಘುವೀರ್ ಬದುಕೂ…

ದೇವರನ್ನೆ ಕೆತ್ತಿದ ನಾವು…..

ಕಲ್ಲು ಹೇಗೆ ಹುಟ್ಟಿತು,
ಲೋಕ ಕೇಳುವುದಿಲ್ಲ.
ಮೂರ್ತಿ ಹೇಗೆ ಹುಟ್ಟಿತು,
ಲೋಕ ಕೇಳದೆ ಬಿಡುವುದಿಲ್ಲ…

ಕಲ್ಲಾಗಿ ಹುಟ್ಟಿದೆ,
ತೆವಳುವ, ಓಡುವ
ದುಃಖ ಮಳೆಯಾಗಿ ಸುರಿದರೂ ನೆನೆಯದ ಕಲ್ಲು..
ಶಬ್ದ, ವಾಸನೆಗಳ ಕಲ್ಲು….

ಹುಟ್ಟಿದ್ದೇ ಪಾಪವೇನೋ,
ಜಂಭವೇ ನಿನಗೆ!?
ಬೆಟ್ಟದ ಮೆಟ್ಟಿಲಾಗಿಸಿದರು,
ಎಲ್ಲ ತುಳಿಯಲಿ ಎಂದು…

ಜಗಕೆ ಮೆಟ್ಟಿಲಾಗಿ ಮಲಗುವುದು ಎಷ್ಟು ಸುಖ…
ಎಲ್ಲ ಪಾದಗಳು ತುಳಿದಾಗ ಹದವಾಗುವುದೆಂದರೆ;
ನೋಡಲಿಕ್ಕಷ್ಟೆ ಕತ್ತಿ ಹರಿತವಾಗಿರುವ ನಿಜದ ಸೌಂದರ್ಯ.
ಕೋಟಿ ಪಾದಗಳ ಕೆಳಗಾದವನು
ಒಂದೊಮ್ಮೆ ಕಿರೀಟವಾದಾನು –
ಹೆದರಿದರು!

ಮೆಟ್ಟಿಲ ಕಿತ್ತರು,
ತೊಟ್ಟಿಲುಗಳಿಲ್ಲದ ನಾಡಿಗೆ ಒಗೆದರು.
ಅವ್ವನಿಲ್ಲದ ನಾಡಲ್ಲಿ ಅದಾರು ಅತ್ತಾರು?
ಹುಟ್ಟಿಲ್ಲದ ಬೀಡಲ್ಲಿ
ಸಾವಿಗ್ಯಾರು ಹೆದರಿಯಾರು?
ಹುಟ್ಟು – ಸಾವುಗಳಾಚೆಗಿನ ಕಲ್ಲು
ಕೊರಳಿಲ್ಲದ ಕೊಳಲ ಮೌನವಾಯ್ತು.

ಬಡ್ಡೀಮಗನೆ!
ಸಾವಿನಾಚೆಗೂ ಬದುಕಲು ಹವಣಿಸುವೆಯಾ?
ಆ ಕಲ್ಲ ಗೋರಿಯ ಮುಖವಾಗಿಸಿದರು.
ಅಸಂಖ್ಯ ಗೋರಿಗಳ ನಡುವೆ
ಇದೊಂದು ಕಲ್ಲು ಅಸ್ಥಿಪಂಜರಗಳನೂ
ಆಕರ್ಷಿಸತೊಡಗಿತು.
“ಕಲ್ಲು ಚಿಗುರಬಾರದು”
ಜಗದ ನಿಯಮ ಮೀರಿದರೆ
ಗೋರಿಗಳೂ ನಿಷೇಧಿಸುತ್ತವೆ.
ಉಳಿದದ್ದೊಂದೇ –
ಬಂಧನ…

ದೇವಮೂರ್ತಿಗಿಂತ ಬೇರೆ ಬಂಧನ ಬೇಕೆ?
ಕೆತ್ತಿದರು…. ಕೆತ್ತುತ್ತಲೇ ಇದ್ದರು;
ಅನುಭವಗಳ ಉಳಿಯ ಪೆಟ್ಟೂ ಅಳುವಂತೆ.
ಕಲ್ಲು – ದೇವರಾಯ್ತು.
ಸ್ತುತಿಗಳಾರಂಭ….
ಲೋಕ ಸಹಿಸೀತೆ?
ದೇವರನ್ನೆ ಕೆತ್ತಿದವರು ನಾವು,
ದೇವರಾದವರನ್ನೂ ಕೆತ್ತುತ್ತೇವೆ!

ಮತ್ತೆ ಕೆತ್ತನೆ….
ರೂಪ ಮೀರಿ ಕೆತ್ತಿದರೆ ದೇವ ಮೂರ್ತಿಯೂ ವಿರೂಪ.
ಚಿಗುರಲು ಕೈಚಾಚಿದ ತಪ್ಪಿಗೆ ವಿರೂಪ ಮೂರ್ತಿಯಾದ ಕಲ್ಲು –
ಆಲಯದ ಹಂಗ ತೊರೆಯಿತು,
ತಾನೇ ‘ಬಯಲಾ’ಯಿತು.

ರಾಷ್ಟ್ರಕವಿ ಪದವಿ – ಪ್ರಯೋಜನವಿದೆಯೇ, ಅರ್ಥಹೀನ ಪ್ರಲಾಪವೇ?

ಸರ್ಕಾರ ಯಾವುದನ್ನೆಲ್ಲ ಮುಟ್ಟುತ್ತದೆಯೋ ಅವೆಲ್ಲವೂ ಜಡವಾಗುತ್ತವೆ ಎನ್ನುತ್ತಿದ್ದರು ಲಂಕೇಶ್. ಬಹುಶಃ ಕರ್ನಾಟಕದಲ್ಲಿ ಸರ್ಕಾರ ನಾಹಿತ್ಯ ಕ್ಷೇತ್ರದ ಹಲವು ಸಂಗತಿಗಳಲ್ಲಿ ಪದೇಪದೇ ಮೂಗು ತೂರಿಸುತ್ತಲೇ ಇರುವುದರಿಂದ ಹಾಗೂ ನಮ್ಮ ಕೆಲವು ಸಾಹಿತಿಗಳೇ ಬೆನ್ನು ಬಿದ್ದು ಸರ್ಕಾರದಿಂದ ಮುಟ್ಟಿಸಿಕೊಳ್ಳುತ್ತಿರುವುದರಿಂದಲೂ ಈ ಕ್ಷೇತ್ರ ಜಡತೆಗೆ ಪಕ್ಕಾದಂತೆ ತೋರುತ್ತಿದೆ.

ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲಿ ‘ರಾಷ್ಟ್ರ ಪ್ರಾಣಿ’ ಚರ್ಚೆಯ ವಸ್ತುವಾಗಿತ್ತು. ಈಗ ‘ರಾಷ್ಟ್ರ ಕವಿ’ ಚರ್ಚೆಯ ವಿಷಯವಾಗಿದೆ. ಒಂದಲ್ಲ ಒಂದು ತಪ್ಪು ಕಾರಣಗಳಿಗೆ ನಮ್ಮಲ್ಲಿ ‘ರಾಷ್ಟ್ರ’ಕ್ಕೆ ಸಂಬಂಧಿಸಿದ ವಿಷಯಗಳು ಕಾವೇರುತ್ತಲೇ ಇರುತ್ತವೆ. ಇದಕ್ಕೆ ಸಾಹಿತ್ಯದ ಸ್ಪರ್ಶವಿದ್ದರಂತೂ ತಪ್ಪುವ ದಾರಿಗೆ ಲೆಕ್ಕವೇ ಇಲ್ಲ. ಸಾಹಿತ್ಯಕ್ಷೇತ್ರದ ರಾಜಕಾರಣ ಬಹಳ ಬಾರಿ ಆಡಳಿತ ರಾಜಕಾರಣದಷ್ಟೇ ಉಲ್ಬಣಗೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ಏನು ನಡೆಯುತ್ತಿದೆ, ಯಾಕಾಗಿ ನಡೆಯುತ್ತಿದೆ ಅನ್ನುವುದೇ ಅರ್ಥವಾಗುವುದಿಲ್ಲ. ಅಷ್ಟು ಗೋಜಲುಗೊಂಡಿರುತ್ತದೆ. ನಮ್ಮ ಕರ್ನಾಟಕದಲ್ಲಿ ಇದರ ಬಿಸಿ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು.
ಕೆಲವು ದಿನಗಳಿಂದ ನಾಡಿನ ಕವಿಯೊಬ್ಬರಿಗೆ ‘ರಾಷ್ಟ್ರಕವಿ’ ಪಟ್ಟ ಕಟ್ಟುವ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದೆ. ಕಳೆದ ಬಾರಿಯೆಲ್ಲ ಸರ್ಕಾರವೇ ನಿರ್ಧಾರ ತೆಗೆದುಕೊಂಡು ಇದನ್ನು ನಡೆಸಿತ್ತು. ಆದರೆ ಈ ಸಲ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ರಾಷ್ಟ್ರಕವಿಯನ್ನು ಆರಿಸಲು ಹೊರಟಿದೆ. ಹಾರ ಹಿಡಿದುಕೊಂಡು ಮದುಮಗನನ್ನು ಹುಡುಕಲು ಹೊರಟವರಂತಿದೆ ಸರ್ಕಾರದ ಈ ನಡೆ. ಹಾಗೊಬ್ಬ ರಾಷ್ಟ್ರಕವಿ ಇರಲೇಬೇಕು ಎಂದು ನಿರ್ಧರಿಸಿಕೊಂಡು, ಅನಿವಾರ್ಯಕ್ಕೊಬ್ಬ ಗಂಡ ಎನ್ನುವಂತೆ ಆಡುತ್ತಿರುವ ಸರ್ಕಾರದ ಪಡಿಪಾಟಲು ಜನಸಾಮಾನ್ಯರಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ

ಅಷ್ಟೊಂದು ಅನಿವಾರ್ಯವೇ?
ಇದು ೧೯೪೯ನೇ ಇಸವಿಯ ಕಥೆ. ಆಗ ಆಡಳಿತ ನಡೆಸುತ್ತಿದ್ದ ಮದರಾಸು ಸರ್ಕಾರ ಐದು ಭಾರತೀಯ ಭಾಷೆಗಳ ಕವಿಗಳನ್ನು ಗುರುತಿಸಿ ಅವರಿಗೆ ‘ರಾಷ್ಟ್ರಕವಿ’ ಅನ್ನುವ ಬಿರುದು ನೀಡಿ ಸನ್ಮಾನಿಸಿತ್ತು. ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. ಉಳಿದಂತೆ ಮೈಥಿಲೀ ಶರಣ ಗುಪ್ತ, ರಾಮಧಾರಿ ಸಿಂಗ್ ‘ದಿನಕರ್’, ಕವಿ ಪ್ರದೀಪ್ ಈ ಯಾದಿಯಲ್ಲಿದ್ದರು. ಮದರಾಸು ಸರ್ಕಾರ ಘೋಷಿಸಿದ್ದು ಐದು ಭಾಷೆಗಳ ಕವಿಗಳನ್ನು ಎಂದು. ಆದರೆ ಈವರೆಗೆ ಲಭ್ಯವಿರುವುದು ಕೇವಲ ನಾಲ್ಕು ಜನರ ಹೆಸರು. ಇನ್ನೊಂದು ಭಾಷೆ ಅಥವಾ ಕವಿಯ ಉಲ್ಲೇಖವೇ ಇಲ್ಲ. ಯಾಕೆ ಹೀಗಾಯ್ತು? ಅಷ್ಟೇ ಅಲ್ಲ, ಈ ಪುರಸ್ಕಾರ ನೀಡುವ ಚಿಂತನೆ ನಡೆದು ಕವಿಗಳ ಆಯ್ಕೆ. ಮಾಡಿದ್ದು ಸ್ವಾತಂತ್ರ್ಯಪೂರ್ವದಲ್ಲಿಯೇ. ದಾಖಲೆಗಳ ಪ್ರಕಾರ ೧೯೪೬ರ ವೇಳೆಗಾಗಲೇ ಅದು ನಿರ್ಧಾರವಾಗಿಹೋಗಿತ್ತು. ಆದರೆ ಅದನ್ನು ಜಾರಿಗೊಳಿಸಲು ಮೂರು ವರ್ಷಗಳು ಕಾಯಬೇಕಾಯಿತು. ಇದಕ್ಕೆ ಕಾರಣವೇನು? ಇವೆಲ್ಲವೂ ರಹಸ್ಯದಂತಾಗಿ, ಇಂದಿಗೂ ಮದರಾಸು ಸರ್ಕಾರ ಇಂಥದೊಂದು ಪುರಸ್ಕಾರ ಘೋಷಿಸಿದ್ದರ ಹಿನ್ನೆಲೆಯಾಗಲೀ ಅದರಿಂದ ಉಂಟಾದ ಲಾಭವಾಗಲೀ ಏನೆಂಬುದು ತಿಳಿಯದೆ ಉಳಿಯಿತು.
ಇಷ್ಟಕ್ಕೂ ಇದು ಮದರಾಸು ಸರ್ಕಾರದ ಸೀಮಿತ ಆಯ್ಕೆಯಾಗಿತ್ತು. ಇದರ ಹೊರತಾಗಿ ತಮಿಳರು ತಮ್ಮ ಹೆಮ್ಮೆಯ ಕವಿ ಸುಬ್ರಮಣ್ಯ ಭಾರತಿಯನ್ನು ರಾಷ್ಟ್ರಕವಿ ಎಂದು ಕರೆದುಕೊಳ್ಳುತ್ತಾರೆ. ತೆಲುಗರು ಒಗೆಟಿ ಅಚ್ಯುತರಾಮ ಶಾಸ್ತ್ರಿಯವರನ್ನು ರಾಷ್ಟ್ರ ಕವಿ ಅಂದುಕೊಳ್ಳುತ್ತಾರೆ. ಬಂಗಾಳಿಗಳಿಗೆ ರವೀಂದ್ರ ನಾಥ ಟಾಗೋರ್ ರಾಷ್ಟ್ರಕವಿಯಾಗುತ್ತಾರೆ. ಕೆಲವರು ವಂದೇಮಾತರಂ ಬರೆದ ಬಂಕಿಮ ಚಂದ್ರರನ್ನು ರಾಷ್ಟ್ರಕವಿ ಎಂದು ಕರೆದುಕೊಳ್ಳುತ್ತಾರೆ. ಹೀಗೆ ಹಲವು ಡೆಫೆನಿಷನ್‌ಗಳಿಗೆ ಒಳಗಾಗಿ ನಿರ್ದಿಷ್ಟ ಸಮುದಾಯಗಳಿಂದ ಗುರುತಿಸಲ್ಪಟ್ಟಿರುವ ರಾಷ್ಟ್ರಕವಿಗಳು ನಮ್ಮ ದೇಶದಲ್ಲಿ ಆಗಿಹೋಗಿದ್ದಾರೆ. ಹೀಗಿರುವಾಗ ಪ್ರಸ್ತುತ ಕರ್ನಾಟಕವು ಯಾರನ್ನು, ಯಾವ ಮಾನದಂಡದ ಮೇಲೆ ರಾಷ್ಟ್ರಕವಿಯನ್ನಾಗಿ ಆರಿಸಲು ಹೊರಟಿದೆ? ಒಂದು ಅನಿವಾರ್ಯ ಸಂಪ್ರದಾಯದಂತೆ ಈ ಆಯ್ಕೆ ಮಾಡಲು ಹೊರಟಿದೆಯಾ? ಅಥವಾ ಇದರ ಹಿಂದೆ ಏನಾದರೂ ಸಾಹಿತ್ಯಕ ಲಾಬಿ ನಡೆಯುತ್ತಿದೆಯಾ? ಅದಾಗಲೇ ಹತ್ತು ಹಲವು ಥರದಲ್ಲಿ ಒಡೆದುಹೋಗಿ ಪರಸ್ಪರ ಕೆಸರೆರಚುವಿಕೆಯಲ್ಲಿ ಮಗ್ನವಾಗಿರುವ ಕನ್ನಡ ಸಾಹಿತ್ಯ ಲೋಕದ ಯಾವ ಬಣ ಇದರ ಹಿಂದೆ ಕೆಲಸ ಮಾಡುತ್ತಿದೆ? ಇಷ್ಟಕ್ಕೂ ರಾಷ್ಟ್ರಕವಿ ಪಟ್ಟ ಕಟ್ಟುವುದು ಅಷ್ಟೊಂದು ಅನಿವಾರ್ಯವೇ?
ಅಧಿಕೃತವಾಗಿ ಘೋಷಿಸಲ್ಪಟ್ಟ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈಗಳು ತಿರಿಕೊಂಡ ನಂತರ ಎರಡು ವರ್ಷಗಳ ಕಾಲ ತೆರವಾಗಿದ್ದ ಸ್ಥಾನವನ್ನು ಕುವೆಂಪು ತುಂಬಿದರು. ೧೯೬೫ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು ’ರಾಷ್ಟ್ರಕವಿ’ ಎಂದು ಘೋಷಿಸಿತು. ಕುವೆಂಪು ೧೯೯೪ರಲ್ಲಿ ನಿಧನರಾದ ನಂತರ ಸುಮಾರು ಒಂದು ದಶಕದ ಕಾಲ ರಾಷ್ಟ್ರಕವಿ ಎಂದು ಯಾರನ್ನೂ ಗುರುತಿಸಲಾಗಿರಲಿಲ್ಲ. ಈ ದೀರ್ಘ ಅಂತರದ ನಂತರ ೨೦೦೬ರಲ್ಲಿ ಜಿ.ಎಸ್.ಶಿವರುದ್ರಪ್ಪನವರನ್ನು ಮೂರನೆಯ ರಾಷ್ಟ್ರಕವಿ ಎಂದು ಘೋಷಿಸಲಾಯ್ತು. ಈ ವೇಳೆಗಾಗಲೇ ಇಷ್ಟು ಅಂತರದಲ್ಲಿ ರಾಷ್ಟ್ರಕವಿಯ ಅಭಿದದಾನ ನೀಡುವ ಅಗತ್ಯ ಇದೆಯೇ ಎಂಬ ಚರ್ಚೆಗಳು ಎದ್ದಿದ್ದವು. ಆದರೆ ಜಿಎಸ್ಸೆಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಆಧಾರz ಮೇಲೆ ಚರ್ಚೆ ತಣ್ಣಗಾಯ್ತು. ಆದರೂ ಹತ್ತು ವರ್ಷಗಳ ನಂತರ ಈ ಉಪಾಧಿಯನ್ನು ಮರುಸ್ಥಾಪಿಸಿರುವುದರ ಹಿಂದೆ ರಾಜಕೀಯ ಉದ್ದೇಶಗಳು ಇದ್ದೇ ಇವೆ ಎಂಬುದು ಜನಸಾಮಾನ್ಯರೂ ಊಹಿಸಬಹುದಾಗಿತ್ತು. ಮತ್ತು ಈ ಕಾರಣದಿಂದಲೇ ರಾಷ್ಟ್ರಕವಿ ಉಪಾಧಿಯ ಬಗ್ಗೆ ಜನ ಗೌರವದಷ್ಟೇ ‘ಇದೊಂದು ರಾಜಕೀಯ’ ಎನ್ನುವ ತಾತ್ಸಾರವನ್ನೂ ಹೊಂದಿದ್ದರು.
ಈಗ ಜಿಎಸ್ಸೆಸ್ ಇಲ್ಲವಾಗಿ ಒಂದು ವರ್ಷ ಸಂದಿದೆಯಷ್ಟೇ. ರಾಜ್ಯ ಸರ್ಕಾರ ಆತುರಾತುರವಾಗಿ ಯಾರಾದರೊಬ್ಬರಿಗೆ ರಾಷ್ಟ್ರಕವಿ ಪೇಟ ತೊಡಿಸಲು ಹಪಹಪಿಸುತ್ತಿದೆ. ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳು ಇದ್ದಲ್ಲಿ ಮುಂದೆ ಬರಬಹುದೆಂದು ಹೇಳಿಕೆ ನೀಡಿ ಟೀಕೆಗೊಳಗಾಗಿದ್ದ ಸರ್ಕಾರ, ಈಗ ಆ ಜವಾಬ್ದಾರಿಯನ್ನು ಜನರ ಹೆಗಲಿಗೆ ವರ್ಗಾಯಿಸಿ ಆ ಹುದ್ದೆಯನ್ನು ಮತ್ತಷ್ಟು ಹಗುರಾಗಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಆಯ್ಕೆ ಪ್ರಕ್ರಿಯೆಗೆ ಸಮಿತಿಯೊಂದನ್ನು ರಚಿಸಿಲಾಗಿದ್ದರೂ ಅವೆಲ್ಲ ಮಣ್ಣೆರಚುವ ತಂತ್ರ ಎಂದು ಸಾಹಿತ್ಯ ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ.

ಹೆಸರಲ್ಲೂ ಗೋಜಲು
ಇಷ್ಟಕ್ಕೂ ‘ರಾಷ್ಟ್ರಕವಿ’ಎನ್ನುವ ಉಪಾಧಿಯಲ್ಲೆ ಗೊಂದಲವಿದೆ. ರಾಜ್ಯವು ಗುರುತಿಸಿ ಆರಿಸಿಕೊಂಡ ಕವಿ ರಾಷ್ಟ್ರಕವಿ ಹೇಗಾಗುವರು? ಒಬ್ಬ ಕವಿ ಜೀವಿತದಲ್ಲಿ ಇರುವವರೆಗೂ ಆತ ರಾಷ್ಟ್ರಕವಿಯಾಗಿರುತ್ತಾನೆ ಎಂದರೆ, ಅದೇ ಅರ್ಹತೆಯುಳ್ಳ ಮತ್ತೊಬ್ಬ ಕವಿ ಆ ಕಾಲ ಘಟ್ಟದಲ್ಲಿ ಜೀವಿಸಿದ್ದರೆ ಆತ ಆ ಉಪಾಧಿಯಿಂದ ಹೊರಗೆ ಉಳಿಯಬೇಕಾಗುತ್ತದೆಯಲ್ಲವೆ? ಇಂಥದೊಂದು ಪದವಿ ದೇಶದ ಎಲ್ಲ ರಾಜ್ಯಗಳಲ್ಲೂ ಇದೆಯಾ?
ಅಲ್ಲದೆ ಇಲ್ಲೊಂದು ಮುಖ್ಯ ದೋಷವೂ ಇದೆ. ರಾಷ್ಟ್ರಕವಿ ಎನ್ನುವುದು ಒಂದು ‘ಉಪಾಧಿ’ ಎಂದು ಹೆಳಲಾಗುತ್ತಿದೆ ತಾನೆ? ಆದರೆ ನಿಘಂಟುವಿನಲ್ಲಿ ಉಪಾಧಿ ಶಬ್ದಕ್ಕೆ ಬಿರುದು, ಪ್ರಶಸ್ತಿ, ಪದವಿ ಮೊದಲಾದ ಅರ್ಥಗಳೇ ಅಲ್ಲದೆ, ತೋರಿಕೆ, ವೇಷ, ಮೋಸ, ವಂಚನೆ, ಯುಕ್ತಿ, ಹಿಂಸೆ, ಉಪದ್ರವ ಎಂಬ ನಾನಾರ್ಥಗಳೂ ಇವೆ! ಯಾವ ಕವಿಗೆ ಉಪಾಧಿಯನ್ನು ಕೊಡಲಾಗುತ್ತದೆ ಅನ್ನುವುದರ ಮೇಲೆ ಅದರ ಅರ್ಥಾನರ್ಥಗಳು ನಿರ್ಧಾರವಾಗುತ್ತವೆ. ಈ ನಡುವೆ ರಾಷ್ಟ್ರಕವಿ ಎಂಬುದನ್ನು ನಾಡಕವಿ ಎಂದು ಬದಲಾಯಿಸಬೇಕು ಎಂಬ ಆಗ್ರಹಗಳೂ ಅಲ್ಲಲ್ಲಿ ಕೇಳಿಬರುತ್ತಿವೆ. ಹೆಸರು ಬದಲಿಸಿದ ಮಾತ್ರಕ್ಕೆ ಆಶಯ ಬದಲಾಗುವುದಿಲ್ಲ ಎನ್ನುವ ಕಾರಣದಿಂದ ಸರ್ಕಾರ ಅದನ್ನು ಕಿವಿಗೆ ಹಾಕಿಕೊಂಡಿಲ್ಲ.
ಈವರೆಗೆ ಅರ್ಥವಾಗದ ಮತ್ತೊಂದು ವಿಷಯವೆಂದರೆ, ಮದರಾಸು ಸರ್ಕಾರ ಸ್ಥಾಪಿಸಿದ ಈ ಪುರಸ್ಕಾರಕ್ಕೆ ಕರ್ನಾಟಕ ಸರ್ಕಾರ ಇಷ್ಟೊಂದು ಮಹತ್ವ ನೀಡುತ್ತಿರುವುದು ಯಾಕೆ ಅನ್ನೋದು. ಏಕೆಂದರೆ, ಆಗ ಘೋಷಿಸಲ್ಪಟ್ಟ ಉಳಿದ ಯಾವ ಭಾಷೆಗಳಲ್ಲೂ ಈ ಪದ್ಧತಿ ಮುಂದುವರೆಯಲಿಲ್ಲ. ಇದು ಉಳಿದುಕೊಂಡಿದ್ದು ಕನ್ನಡದಲ್ಲಿ ಮಾತ್ರವೇ. ರಾಷ್ಟ್ರಕವಿ ಪುರಸ್ಕಾರವನ್ನು ಒಂದು ಪರಂಪರೆಯಾಗಿ ಮುಂದುವರೆಸಲು ಕರ್ನಾಟಕ ಸರ್ಕಾರ ಯಾಕೆ ಟೊಂಕ ಕಟ್ಟಿ ನಿಂತಿದೆಯೋ ಗೊತ್ತಿಲ್ಲ. ಹಾಗೆಂದು ಅರ್ಹ ಸಾಹಿತಿಯೊಬ್ಬರು ಇರುವುದೇ ಆದಲ್ಲಕಿ ಕೊಡದೆ ಉಳಿಯುವುದರಲ್ಲಿಯೂ ಅರ್ಥವಿಲ್ಲ. ಆದರೆ ಅದನ್ನೊಂದು ಊರಜಾತ್ರೆಯಂತೆ ಮಾಡಿ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಬೇಕಿರುವ ವ್ಯಕ್ತಿಯ ಕುರಿತು ಹಗ್ಗಜಗ್ಗಾಟ ನಡೆಸುವುದು ಸರಿಯಲ್ಲ ಅನ್ನಿಸುತ್ತದೆ.
ಈ ಎಲ್ಲದರ ನಡುವೆ ವಿಚಿತ್ರ ಅನ್ನಿಸುವ ಸಂಗತಿ, ಕವಿಗೆ ಮಾತ್ರ ಈ ಮನ್ನಣೆ ಯಾಕೆ ಅನ್ನುವುದು. ಸಾಹಿತ್ಯದಲ್ಲಿಯೇ ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ ಇತ್ಯಾದಿ ಪ್ರಕಾರಗಳಿವೆ. ಹಾಗಾದರೆ ರಾಷ್ಟ್ರ ಕಥೆಗಾರರು, ಕಾದಂಬರಿಕಾರರು ಇತ್ಯಾದಿಗಳೂ ಇರಬೇಕಲ್ಲವೆ? ಅವು ಯಾವುದಕ್ಕೂ ಆಸ್ಪದವಿಲ್ಲದೆ ಕವಿಗಳಿಗೆ ಮಾತ್ರವೇ ಈ ಪ್ರತಿಷ್ಠೆ ಯಾಕೆ? ಇನ್ನು ಒಟ್ಟಾರೆ ಸೃಜನಶೀಲತೆಗೆ ಮನ್ನಣೆ ಇತ್ತು, ರಾಷ್ಟ್ರ ಸಂಗೀತಗಾರ, ರಾಷ್ಟ್ರ ಕಲಾವಿದ ಇತ್ಯಾದಿಗಳೂ ಇರಬೇಕಿತ್ತಲ್ಲವೆ? ಈ ರಾಷ್ಟ್ರಕವಿ ಉಪಾಧಿ ಪುರುಷ ಕವಿಗಳಿಗೆ ಮಾತ್ರ ಸೀಮಿತವೇ? ಇಂಥಾ ಹತ್ತಾರು ಚಿತ್ರವಿಚಿತ್ರ ತರ್ಕಗಳು ಜನಸಾಮಾನ್ಯರ ಮನಸಿನಲ್ಲಿ ಹಾದುಹೋಗುತ್ತಿವೆ.
ಈಗಾಗಲೇ ಕನ್ನಡದ ಹೆಸರಲ್ಲಿ, ಸಾಹಿತ್ಯದ ಹೆಸರಲ್ಲಿ ಪೋಲಾಗುತ್ತಿರುವ ಹಣಕ್ಕೆ ಮಿತಿಯಿಲ್ಲ. ಪ್ರಾಧಿಕಾರ, ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುತ್ತಿರುವ ಬಿರುದು, ಪ್ರಶಸ್ತಿ, ಮನ್ನಣೆ, ಬಹುಮಾನಗಳಿಗೆ ವಿನಿಯೋಗಿಸುತ್ತಿರುವ ಮೊತ್ತದಲ್ಲಿ ಸಾಕಷ್ಟು ಕನ್ನಡಾಭಿವೃದ್ಧಿ ಕೆಲಸಗಳನ್ನು ಮಾಡಬಹುದಿತ್ತು. ಏಕೆಂದರೆ ಬಹುತೇಕ ಈ ಎಲ್ಲ ಪ್ರಶಸ್ತಿಗಳ ಕೊಡು – ಕೊಳ್ಳುವಿಕೆಯ ಹಿಂದೆಯೂ ವಶೀಲಿಬಾಜಿ ಇದ್ದೇ ಇದೆ ಎಂಬುದು ಯಾರೂ ಜೋರಾಗಿ ಮಾತನಾಡದ ಸತ್ಯವೇ ಆಗಿದೆ. ಕರ್ನಾಟಕ ಸರ್ಕಾರವಂತೂ ಪುಸ್ತಕ ಪ್ರಕಟಣೆಗಿಂತ ಹೆಚ್ಚು ಹಣ ಪ್ರಶಸ್ತಿಗಳಿಗೇ ಖರ್ಚು ಮಾಡುತ್ತಿದೆ ಎಂದರೆ ತಪ್ಪಿಲ್ಲ.

ತಪ್ಪದ ಮುಜುಗರ
ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರಕವಿ ಎಂದು ಯಾರನ್ನು ಆಯ್ಕೆ ಮಾಡಿದರೂ, ಹೇಗೆ ಆಯ್ಕೆ ಮಾಡಿದರೂ ಗೊಂದಲ ತಪ್ಪಿದ್ದಲ್ಲ. ರಾಷ್ಟ್ರಕವಿಯನ್ನು ಯಾರು ನಿರ್ಧರಿಸಬೇಕು, ಆ ಅರ್ಹತೆ ಯಾರಿಗಿದೆ ಎನ್ನುವುದೇ ಮೊದಲನೆಯ ಸವಾಲು. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸಾಃಇತಿಗಳು ಮಾತ್ರವೇ ನಿಯುಕ್ತರಾಗುತ್ತಿದ್ದರು. ಸಾಹಿತಿಗಳೇ ಆಗಬೇಕೆಂದೇನಿಲ್ಲ, ಸಾಹಿತ್ಯಾಭಿಮಾನಿ ಕನ್ನಡಿಗರಾದರೆ ಸಾಕು ಅನ್ನುವ ನಿರ್ಣಯದಿಂದಾಗಿ ಸಾಹಿತಿಗಳಲ್ಲದವರೂ ಆ ಸ್ಥಾನದಲ್ಲಿ ಕೂರುವಂತಾಯ್ತು. ಇದರಿಂದ ಎಷ್ಟು ಒಳ್ಳೆಯದಾಯ್ತು, ಏನು ಕೆಟ್ಟದ್ದಾಯ್ತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ರಾಷ್ಟ್ರಕವಿ ಆಯ್ಕೆಯೂ ಹೀಗೆಯೇ ಕೇವಲ ಕನ್ನಡಿಗರ ಅಭಿಮತದ ಮೇಲೆ ನಡೆದರೆ ಅದು ಎಷ್ಟು ಪರಿಪೂರ್ಣವಾಗಿರಲಿದೆ? ಕೇವಲ ಜನಪ್ರಿಯತೆಯ ಆಧಾರದ ಮೇಲೆ ಜನಸಾಮಾನ್ಯರು ತಮ್ಮ ಆಯ್ಕೆ ಘೋಷಿಸಿದರೆ, ತೆರೆಮರೆಯ ನಿಜಸಾಧಕರಿಗೆ, ಹಿರಿಯರಿಗೆ ಅಗೌರವ ಆಗುವುದಿಲ್ಲವೆ? ಎಲ್ಲಕ್ಕಿಂತ ಮೂಕ್ಯವಾಗಿ, ಕಾವ್ಯದ ಶ್ರೇಷ್ಠತೆಯನ್ನು ಜನಮತಗಣನೆಯಿಂದ ಆಯ್ಕೆ ಮಾಡಲು ಸಾಧ್ಯವಿಲ್ಲ. ಒಬ್ಬ ಕವಿಯನ್ನು ಈ ಪಟ್ಟದಲ್ಲಿ ಇರಿಸುವುದು, ಅವರ ನಂತರ ಬೇರೆಯವರನ್ನು ಆ ಜಾಗಕ್ಕೆ ಹುಡುಕುವುದು, ಆಸ್ಥಾನ ಕವಿಯ ಪರಂಪರೆಯಂತೆ ಕಾಣಿಸುತ್ತದೆಯಷ್ಟೇ.
ಎಲ್ಲಕ್ಕಿಂತ ಮುಖ್ಯವಾಗಿ, ವರ್ತಮಾನದಲ್ಲಿ ಒಬ್ಬ ಸಮಕಾಲೀನ ಕವಿಯನ್ನು ರಾಷ್ಟ್ರಕವಿ ಎಂದು ಘೋಷಿಸುವುದು ಕವಿಯನ್ನೇ ಮುಜುಗರಕ್ಕೆ ಸಿಕ್ಕಿಸುವ ಪ್ರಯತ್ನದಂತೆ ಕಾಣುತ್ತದೆ. ಜೊತೆಗೆ, ಸರ್ಕಾರ ಅದನ್ನು ಘೋಷಣೆ ಮಾಡಲು ಮಾಡುತ್ತಿರುವ ತಡಕಾಟ ಮತ್ತಷ್ಟು ಆಭಾಸವಾಗಿ ಕಾಣಿಸುತ್ತಿದೆ. ಅದರಲ್ಲಿರುವ ರಾಜಕಾರಣ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಲಾಬಿಯನ್ನು ಒಳಗೊಂಡ ವಿದ್ಯಮಾನ ಒಬ್ಬ ಸಭ್ಯ ಕವಿಯನ್ನು ಕಸಿವಿಸಿಗೆ ನೂಕುತ್ತದೆ. ಜೊತೆಗೆ, ಎಷ್ಟೇ ಜನಮತವೆಂದು ಘೋಷಿಸಿದರೂ ಜನರನ್ನು ತಲುಪುವ ಕವಿಗೆ ರಾಷ್ಟ್ರಕವಿ ಪಟ್ಟ ಸಿಗಲಾರದು. ಇಲ್ಲಿ ಜನರೇ ಆಯ್ಕೆ ಮಾಡಿದರೂ ಜನಸಾಮಾನ್ಯರ ಅಭಿಪ್ರಾಯ ಎಂದಾಗುವುದಿಲ್ಲ. ಏಕೆಂದರೆ ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿಯಿರುವ, ರಾಜಕಾರಣದ ವಲಯಗಳು ಮಾತ್ರ ಅದಕ್ಕೆ ಪ್ರತಿಕ್ರಿಯಿಸುತ್ತವೆ. ಈ ಮೂಲಕ ಅದು ಸೀಮಿತ ವಲಯದ ಆಯ್ಕೆಯಾಗಿ ಉಳಿದುಬಿಡುತ್ತದೆ.
ಸರ್ಕಾರ ಯಾವುದನ್ನೆಲ್ಲ ಮುಟ್ಟುತ್ತದೆಯೋ ಅವೆಲ್ಲವೂ ಜಡವಾಗುತ್ತವೆ ಎನ್ನುತ್ತಿದ್ದರು ಲಂಕೇಶ್. ಬಹುಶಃ ಕರ್ನಾಟಕದಲ್ಲಿ ಸರ್ಕಾರ ನಾಹಿತ್ಯ ಕ್ಷೇತ್ರದ ಹಲವು ಸಂಗತಿಗಳಲ್ಲಿ ಪದೇಪದೇ ಮೂಗು ತೂರಿಸುತ್ತಲೇ ಇರುವುದರಿಂದ ಹಾಗೂ ನಮ್ಮ ಕೆಲವು ಸಾಹಿತಿಗಳೇ ಬೆನ್ನು ಬಿದ್ದು ಸರ್ಕಾರದಿಂದ ಮುಟ್ಟಿಸಿಕೊಳ್ಳುತ್ತಿರುವುದರಿಂದಲೂ ಈ ಕ್ಷೇತ್ರ ಜಡತೆಗೆ ಪಕ್ಕಾದಂತೆ ತೋರುತ್ತಿದೆ. ಇಲ್ಲಿ ವಿವಾದಗಳು ನಡೆಯುವಷ್ಟು ವಾಗ್ವಾದಗಳು ನಡೆಯುತ್ತಿಲ್ಲ. ಸಾಹಿತ್ಯ ರಚನೆಯೆಂದರೆ ಸರ್ಕಾರದ ಯಾವುದಾದರೂ ಹುದ್ದೆಗೆ, ಜವಾಬ್ದಾರಿಗೆ ಅಥವಾ ಮನ್ನಣೆಗೆ ಒಂದು ಚಿಮ್ಮುಹಲಗೆ ಎಂದೇ ಹಲವರು ಭಾವಿಸಿರುವಂತಿದೆ. ಈ ಭಾವನೆ ಮುಂದಿನ ಪೀಳಿಗೆಗೂ ಹರಿಸು ದಾಟುತ್ತಿರುವುದು ದುರಂತ.
ಎಲ್ಲಿಯವರೆಗೆ ಯಾವುದಾದರೊಂದು ಪುರಸ್ಕಾರವನ್ನು, ಗೌರವವನ್ನು, ಗುರುತನ್ನು ಒಂದು ಅನಿವಾರ್ಯ ಸಂಪ್ರದಾಯದಂತೆ ಮುಂದುವರೆಸಿಕೊಂಡು ಹೋಗಲಾಗುತ್ತದೆಯೋ ಅಲ್ಲಿಯವರೆಗೆ ಅದಕ್ಕಾಗಿ ಲಾಬಿ ಮಾಡುವವರೂ ಇದ್ದೇ ಇರುತ್ತಾರೆ. ಅಂಥದೊಂದು ಅನಿವಾರ್ಯ ಸಂಪ್ರದಾಯದ ಹಕ್ಕುದಾರರಾಗಲೂ ಸಿದ್ಧತೆ ನಡೆಸುವುದಕ್ಕೆ ತಮ್ಮ ಶ್ರಮವನ್ನೂ ಸೃಜನಶೀಲತೆಯನ್ನೂ ಮುಡಿಪಾಗಿಡಲು ತೊಡಗುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಕೇವಲ ರಾಷ್ಟ್ರಕವಿ ಪುರಸ್ಕಾರವಷ್ಟೇ ಅಲ್ಲ, ಕೈಬಿಡಬೇಕಾದ ಸಾಕಷ್ಟು ಸಂಗತಿಗಳು ಬಾಕಿ ಇವೆ ಎನ್ನುವ ಸತ್ಯ ಕಣ್ಣಿಗೆ ರಾಚುತ್ತದೆ.

ಅನರ್ಹರಿಗೆ ಸಿಗದಿರಲಿ
ಸಾಹಿತ್ಯ ವಲಯದಲ್ಲಿ ಕನ್ನಡ ಮೇಲಿಂದ ಮೇಲೆ ಸುದ್ದಿ ಮಾಡುತ್ತ ಇರುತ್ತದೆ. ಅತಿ ಹೆಚ್ಚು ಜ್ಞಾನಪೀಠಿಗಳನ್ನು ಕೊಟ್ಟ ನಾಡು ಇದು ಎನ್ನುವುದು ಅವುಗಳಲ್ಲೊಂದು. ಆದರೆ ಈ ಎಂಟು ಜ್ಞಾನಪೀಠಿಗಳಲ್ಲಿ ಇಬ್ಬರನ್ನು ಸ್ವತಃ ಕನ್ನಡಿಗರೇ ಆ ಅರ್ಹತೆಯುಳ್ಳವರೆಂದು ಒಪ್ಪಿಕೊಳ್ಳಲು ತಯಾರಿಲ್ಲ. ಇಂದಿಗೂ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಅದು ಲಭಿಸಿದ್ದು ಹೇಗೆ ಎನ್ನುವ ವಿಷಯ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಇನ್ನು ಎಂಟನೆಯ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ಬಗ್ಗೆ ಅಷ್ಟಾಗಿ ನಕಾರಾತ್ಮಕತೆ ಇಲ್ಲದಿದ್ದರೂ ಅಲ್ಲಲ್ಲಿ ಅಸಮಾಧಾನ ಹೊರಹಾಕಿದವರು ಇದ್ದಾರೆ. ಆದರೂ ಕಾರ್ನಾಡ್ ಹಾಗೂ ಯುಆರ್‌ಎ ಗಿಂತ ಕಂಬಾರರಿಗೆ ಕೊಟ್ಟಿದ್ದು ತಪ್ಪೇನಲ್ಲ ಎನ್ನುವ ಒಟ್ಟು ಅಭಿಪ್ರಾಯವಿದೆ.
ಕನ್ನಡದ ಸಾಹಿತಿಗಳು ರಾಜ್ಯದ ಒಳಗೆ ಮಾತ್ರವಲ್ಲ, ಹೊರಗೂ ಲಾಬಿ ನಡೆಸುವಷ್ಟು ಚಾಣಾಕ್ಷರು ಎಂದೇ ಹೇಳಲಾಗುತ್ತದೆ. ಹಾಗೆಂದೇ ಈ ನೆಲದಲ್ಲಿ ಗುರುತೇ ಇಲ್ಲದ ಕೆಲವು ಕವಿಗಳು ದೇಶದೇಶಗಳ ಗೋಷ್ಟಿಗಳಲ್ಲಿ ಕಾಣಿಸಿಕೊಂಡು ತಮ್ಮನ್ನು ‘ಕನ್ನಡದ ಪ್ರತಿನಿಧಿ’ಗಲೆಂದು ಬಿಂಬಿಸಿಕೊಳ್ಳುತ್ತಾರೆ. ಜನರನ್ನು ಸೋಕಿಯೂ ಇರದ ಕೆಲವರು ಕನ್ನಡ ಕಾಯುವ ಉನ್ನತ ಹುದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನ ಸಾಮಾನ್ಯರ ಓದಿಗೆ ನಿಲುಕದ, ಅವರಿಗೆ ದಕ್ಕದ ಹಾಗೂ ಹಾಗೆ ತಲುಪುವಂಥ ಏನನ್ನೂ ಬರೆದೇ ಇರದ ಕೆಲವರು ಪ್ರಶಸ್ತಿ – ಪುರಸ್ಕಾರಗಳನ್ನು ಪಡೆದು ಮನೆಗಳಲ್ಲಿ ಅಲಂಕಾರಕ್ಕೆ ಇಟ್ಟಿರುತ್ತಾರೆ.
ಈ ಕಾರಣದಿಂದಲೇ ಒಂದು ಪೀಳಿಗೆಯ ಅನಂತರ ನಮ್ಮ ಕವಿಗಳು ಯಾರು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಬರದೆ ಹೋಗುವುದು. ಜ್ಞಾನಪೀಠಿಗಳ ವಿಚಾರದಲ್ಲೂ ಹೀಗಾಗಿದೆ. ರಾಷ್ಟ್ರಕವಿಗಳ ವಿಷಯದಲ್ಲೂ ಇದು ಪುನರಾವರ್ತನೆಯಾಗದಿರಲಿ ಎಂಬುದೇ ಸಮಸ್ತ ಕನ್ನಡಿಗರ ಪ್ರಾಮಾಣಿಕ ಆಶಯ.

ಪೇಟಕ್ಕಾಗಿ ಓಟ
ಒಂದು ಕಡೆ ರಾಷ್ಟ್ರಕವಿಯ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೆಲವು ಹಿರಿಯ ಸಾಹಿತಿಗಳು ತಲೆ ಬಾಚಿಕೊಂಡು ಪೇಟ ತೊಡಲು ಸಿದ್ಧರಾಗುತ್ತಿದ್ದಾರೆ. ಹಂಪನಾ “ಸದ್ಯಕ್ಕೆ ಈ ಪ್ರಕ್ರಿಯೆ ಬೇಡವಿತ್ತು” ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಇಂಗಿತ ಸೂಚಿಸಿದರೆ, ಚಂದ್ರಶೇಖರ ಕಂಬಾರ “ಆಯ್ಕೆ ಕುರಿತು ಇಷ್ಟೆಲ್ಲ ಗೊಂದಲ ಯಾಕೆ?” ಎಂದು ಕೆಳುತ್ತ “ನಾನಿಲ್ಲವೆ?” ಎಂಬ ಧ್ವನಿ ಹೊರಡಿಸಿದ್ದಾರೆ. ಚಂಪಾ ಅದಾಗಲೇ ಪ್ರತಿಭಟನೆಯ ಸಿದ್ಧತೆಗಳನ್ನು ನಡೆಸಿದ್ದಾರೆಂದೂ ಪಾಟೀಲ ಪುಟ್ಟಪ್ಪನವರು ತಮ್ಮ ಆಯುಧಗಳನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆಂದೂ ಗುಸುಗುಸು ನಡೆದಿದೆ. ಈ ನಡುವೆ ಕೆ.ಎಸ್.ನಿಸಾರ್ ಅಹಮದ್ ಹಾಗೂ ಚೆನ್ನವೀರ ಕಣವಿ ಅವರ ಹೆಸರುಗಳಷ್ಟೆ ಸರ್ಕಾರದ ಗಮನದಲ್ಲಿದೆ ಎಂದೂ ಹೇಳಲಾಗುತ್ತಿದೆ.
ಈವರೆಗೆ ಘೋಷಿತಗೊಂಡ ಮೂರು ರಾಷ್ಟ್ರಕವಿಗೆಳ ಆಯ್ಕೆ ಪ್ರಕ್ರಿಯೆ ಯಾವುದೇ ಸದ್ದು – ಸುಳಿವಿಲ್ಲದೆ ನಡೆದುಹೋಗಿತ್ತು. ಆದರೆ ಈ ಬಾರಿ ಮಾತ್ರ ಇಷ್ಟೊಂದು ಹೈ ಡ್ರಾಮಾ ನಡೆಯುತ್ತಿದೆ ಎಂದರೆ ಇದರ ಹಿಂದೆ ಭಾರೀ ಲಾಬಿಯೇ ನಡೆಯುತ್ತಿದೆಯೆಂದೂ, ಸಾಹಿತಿಗಳ ಮಲಾಜಿಗೆ ಒಳಗಾಗುವುದನ್ನು ನುಣುಚಿಕೊಳ್ಳಲೋಸುಗವೇ ಸರ್ಕಾರ ನಾಟಕವಾಡುತ್ತಿದೆಯೆಂದೂ ಅನುಮಾನಗಳೆದ್ದಿವೆ. ಆದ್ದರಿಂದಲೇ ಜನತೆಯ ಮೇಲೆ ಆಯ್ಕೆಯ ಹೊಣೆ ಅಥವಾ ಜನಮತದ ಕಾಟಾಚಾರ ಮುಗಿಸಿ ಪ್ರಕ್ರಿಯೆ ಪೂರೈಸಲಿದೆಯೆಂದೂ ಕೆಲವರು ಆಡಿಕೊಳ್ಳುತ್ತಿದ್ದಾರೆ.

ಸಮಿತಿ ಮತ್ತು ಮಾನದಂಡಗಳು
ನಾಲ್ಕನೇ ರಾಷ್ಟ್ರಕವಿ ಆಯ್ಕೆಗಾಗಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಅದರ ಅಧ್ಯಕ್ಷತೆಯನ್ನು ಡಾ.ಕೋ.ಚನ್ನಬಸಪ್ಪನವರಿಗೆ ವಹಿಸಿದೆ. ಈ ಸಮಿತಿ ಅದಾಗಲೇ ಸಭೆ ನಡೆಸಿ ಆಯ್ಕೆಪ್ರಕ್ರಿಯೆಗೆ ಒಂದಷ್ಟು ಮಾನದಂಡಗಳನ್ನೂ ರೂಪಿಸಿದೆ. ಇದರಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳಬಹುದಾಗಿದ್ದು, ರಾಷ್ಟ್ರಕವಿ ಗೌರವಕ್ಕೆ ಅರ್ಹರಾದ ಕವಿಗಳ ಪೂರ್ಣ ಮಾಹಿತಿಯೊಂದಿಗೆ ಇದೇ ತಿಂಗಳ ೨೭ರ ಒಳಗೆ ಸಮಿತಿ ಅಧ್ಯಕ್ಷರ ವಿಳಾಸಕ್ಕೆ ಕಳುಹಿಸಬಹುದೆಂದು ಘೋಷಿಸಿದೆ. ಸಾರ್ವಜನಿಕರು ಕಳುಹಿಸುವ ಅಭಿಪ್ರಾಯವನ್ನು ಸಮಿತಿ ಆಯ್ಕೆ ವೇಳೆ ಪರಿಗಣಿಸುತ್ತದೆಯೆಂದೂ ಹೇಳಲಾಗಿದೆ.
ಸಮಿತಿ ರೂಪಿಸಿರುವ ಮಾನದಂಡಗಳ ಪ್ರಕಾರ ಅಭ್ಯರ್ಥಿಯು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರಬೇಕು, ಸಂಸ್ಕೃತಿ ಉಳಿವಿಗೆ, ಕರ್ನಾಟಕದ ಹಿತರಕ್ಷಣೆಗೆ ಶ್ರಮಿಸಿದವರಾಗಿರಬೇಕು, ಯಾವ ಆಪಾದನೆಗೆ ಗುರಿಯಾಗಿರಬಾರದು, ಚುನಾವಣೆಗಳಿಗೆ ಸ್ಪರ್ಧಿಸಿರಬಾರದು, ಜಾತ್ಯತೀತ, ಸರ್ವಧರ್ಮ ಸಮಾನತೆಯ ಹಾಗೂ ವಿಶ್ವಮಾನವ ಸಂದೇಶದಲ್ಲಿ ನಂಬಿಕೆ ಇರಬೇಕು, ಮೇರು ವ್ಯಕ್ತಿತ್ವ, ಆದರ್ಶ ಜೀವನದ ಗುರುಗಳಂತಿರಬೇಕು.
ಸದ್ಯಕ್ಕೆ ಈ ಎಲ್ಲ ಗುಣಗಳೂ ಇರುವ ಹಿರಿಯ ಕವಿ ಕಾಣುವುದು ಅಪರೂಪ. ಹಾಗೆಂದೇ ನಿಸಾರ್ ಅಹಮದ್ ಹಾಗೂ ಚೆನ್ನವೀರ ಕಣವಿ ಹೊರತಾಗಿ ಮೂರನೆಯ ಹೆಸರು ಯಾರಿಗೂ ತೋಚುತ್ತಿಲ್ಲ. ಸರ್ಕಾರ ಈ ಇಬ್ಬರಲ್ಲೇ ಒಬ್ಬರನ್ನು ಆಯ್ಕೆ ಮಾಡಿ ಮುಗಿಸಬಹುದಿತ್ತು. ಹಾಗೆ ಮಾಡದೆ ಸಮಿತಿ ನೇಮಕದವರೆಗೂ ಹೋಗಿರುವುದ ನೋಡಿದರೆ ಲಾಬಿಕೋರರ ಹಾವಳಿ ಜೋರಾಗಿಯೇ ಇದೆ ಅನ್ನಿಸುತ್ತದೆ. ಈ ಮಾನದಂಡಗಳನ್ನು ಪ್ರಕಟಿಸಿದ ಮೇಲೂ ಅವರು ತಮ್ಮ ಪ್ರಯತ್ನ ನಿಲ್ಲಿಸಿಲ್ಲವೆನ್ನುವುದೇ ಸದ್ಯದ ಅಚ್ಚರಿ.

ಆಯ್ಕೆ ಸಮಿತಿಯಲ್ಲಿ ಯಾರಿದ್ದಾರೆ..?
ಕೋ.ಚನ್ನಬಸಪ್ಪ, ಪುಂಡಲೀಕ ಹಾಲಂಬಿ, ಡಾ.ಹೆಚ್.ಎಸ್.ಪುಷ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಷ್ಣು ನಾಯ್ಕ, ಡಾ.ರೂಪಾ ಹಾಸನ, ಪ್ರಭು ಖಾನಾಪುರೆ, ಡಾ. ಕಾಳೇಗೌಡ ನಾಗವಾರ, ಡಾ.ಕೆ.ಶರೀಫಾ, ಡಾ. ಗಿರಡ್ಡಿ ಗೋವಿಂದರಾಜು, ಡಾ.ಎಲ್.ಹನುಮಂತಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಡಾ.ಮಾಲತಿ ಪಟ್ಟಣಶೆಟ್ಟಿ ಹಾಗೂ ಕೆ.ಎ.ದಯಾನಂದ.
ಸಾರ್ವಜನಿಕರ ಅಭಿಮತದ ಜೊತೆಗೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಮುಖ್ಯ ಕವಿಗಳು, ಸಾಹಿತಿಗಳಿಗೆ ಪತ್ರ ಬರೆಯಲಾಗಿದ್ದು, ಅವರ ಅಭಿಪಾಯ್ರವನ್ನು ಸಹ ಕೇಳಿದ್ದಾರೆಂದು ಹೆಳಲಾಗುತ್ತಿದೆ. ಈ ಎಲ್ಲವನ್ನೂ ಒಗ್ಗೂಡಿಸಿ ಅದು ಹೇಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬ ಕುತೂಹಲ ಎಲ್ಲರದ್ದು.

ಏನಿದು ಪದವಿ?
ರಾಷ್ಟ್ರಕವಿ ಸ್ಥಾನ ಸಂವಿಧಾನಾತ್ಮಕ ಅಥವಾ ಶಾಸನಾತ್ಮಕವಾಗಲಿ ಇರಲೇಬೇಕಾದ ಸ್ಥಾನವಲ್ಲ. ಇದೊಂದು ಹುದ್ದೆಯೂ ಅಲ್ಲ. ಕರ್ತವ್ಯ, ಜವಾಬ್ದಾರಿ, ಸಂಭಾವನೆ, ನೇಮಕ ಪ್ರಕ್ರಿಯೆ, ಶಿಸ್ತುಪಾಲನಾ ನಿಯಮ ಹಾಗೂ ಸೇವಾ ನಿಯಮಗಳಾವುವೂ ಇದಕ್ಕೆ ಅನ್ವಯಿಸುವುದಿಲ್ಲ. ಇದೊಂದು ಗೌರವಾನಿತ್ವ ಸ್ಥಾನಮಾನ. ರಾಷ್ಟ್ರಕವಿ ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಯಂತೆ ಇರುತ್ತಾರೆ. ಅವರ ಖರ್ಚು ವೆಚ್ಚಗಲನ್ನು ಸರ್ಕಾರ ನೊಡಿಕೊಳ್ಳುತ್ತದೆ. ಅವರ ಸಾಹಿತ್ಯವನ್ನು ಪುನರ್‌ಮುದ್ರಿಸಿ ಮುಂದಿನ ಪೀಳಿಗೆಗಳಿಗೆ ಲಭಿಸುವಂತೆ ಮಾಡುತ್ತದೆ.

(ಪತ್ರಿಕೆಗಾಗಿ ಬರೆದಿದ್ದು…)

ಕಡೆಗೂ ಅವನು ಬೆತ್ತಲಾಗಲಿಲ್ಲ…

ಅವರೆಲ್ಲ
ಅವನ ಮೈ ಸುತ್ತಿದ
ಬಟ್ಟೆ ಮೇಲಿನ
ಚಿತ್ತಾರ ಹರಿದರು,
ಬಟ್ಟೆ ನಕ್ಕಿತು
“ಹೊರೆ ಇಳಿಸಿದಿರಿ
ಪುಣ್ಯ ಎಂದು”
ಅವನ ಅಲಂಕಾರಗಳನ್ನೆಲ್ಲ
ಕಿತ್ತು ದಿಕ್ಕಿಗೊಂದರಂತೆ
ಎಸೆದರು,
ಚೆಲ್ಲಿಹೋದ
ಅಲಂಕಾರವೇ ಹೇಳಿತು
“ಅವನ ಅಹಂಕಾರವನೇ
ಕಿತ್ತೆಸೆದ ಮೇಲೆ
ಇನ್ನವನ ಗೆಲ್ಲಲಾದೀತೇ?”
ಕಡೆಗೆ ಅವನ
ನಗು, ನೋಟ,
ಮಾತು, ಕಂಬನಿ
ಸದ್ದು, ಮೌನವನೂ ಬಿಡದೇ
ಎಲ್ಲ ಎಲ್ಲ ಕಿತ್ತೆಸೆದರು…
ಅವನ ಎರಡು ಪಾದ ಹೊತ್ತ
ಭೂಮಿಯೇ ಉಧ್ಗರಿಸಿತು
“ಅರೆರೇ ಇವನು
ಲೋಕದ ನಿರ್ಭಾರ”
ಕಿರೀಟದ ಹಂಗು ಕಳಚಿದ
ಆ ಶಿರ ಶಿಶಿರವಾದಂತೆಲ್ಲ
ಅವನನ್ನು ಬೆತ್ತಲು
ಮಾಡುವ ಶತ ಪ್ರಯತ್ನಗಳು
ಸೋಲುತ್ತಾ ಹೋದವು..,
ರೊಚ್ಚಿಗೆದ್ದವರು
ಅವನ ಬಟ್ಟೆಗಳನ್ನೆಲ್ಲ
ಹರಿದು ಚೂರಾಗಿಸಿದರು
ಕಡೆಗೂ ಅವನು ಬೆತ್ತಲಾಗಲಿಲ್ಲ…
ಯಾಕೆಂದರೆ
“ಅವನು ಧರಿಸಿದ್ದು
ಸೂರ್ಯ ಭೂಮಿಗಳನು
ಬೆಸೆದ
ಬೆಳಕು ಮಾತ್ರ…”…

ಭೈರಪ್ಪನವರನ್ನೆ ಬೈಯೋದ್ಯಾಕೆ ಅಂದ್ರೆ…

ಭೈರಪ್ಪನವರಿಗೆ ಮೋದಿ ಸರ್ಕಾರ ‘ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್‌’ ಹುದ್ದೆ ನೀಡಿದ ಬೆನ್ನಲ್ಲೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಅನ್ನೂ ನೀಡಿದೆ. ಈ ಬಾರಿ ಜ್ಞಾನಪೀಠವೂ ಅವರ ಉಡಿಗೆ ಬೀಳಬಹುದೇನೋ. ತಮ್ಮ ಚಿಂತನೆಯ ಅಧಿಕೃತ ವಕ್ತಾರನಂತೆ ಇರುವ ಭೈರಪ್ಪನವರಿಗೆ ಕೋಮುವಾದಿ ಸರ್ಕಾರ ಸಕಾಲದಲ್ಲಿ ಸೂಕ್ತ ಉಡುಗೊರೆಗಳನ್ನೇ ನೀಡುತ್ತಿದೆ…

ಸುಮಾರು ಐದಾರು ತಿಂಗಳ ಹಿಂದೆ ನಾ.ಡಿಸೋಜಾ ಅವರು ಭಯರಪ್ಪನವನ್ನು ಟೀಕಿಸಿ ಮಾತನಾಡಿದ ಸಂದರ್ಭದಲ್ಲಿ ನಾನು ‘ಪತ್ರಿಕೆ’ಗೆ ಬರೆದಿದ್ದ ಲೇಖನ ನೆನಪಾಯ್ತು. ಇದರಲ್ಲಿನ ಅಭಿಪ್ರಾಯಗಳು ಈಗಲೂ ಪ್ರಸ್ತುತ ಅನ್ನಿಸಬಹುದು…

ಕನ್ನಡ ಸಾಹಿತ್ಯ ಲೋಕ ಕಾಣುತ್ತಿರುವ ವಿಲಕ್ಷಣ ಬರಹಗಾರ ಎಸ್‌.ಎಲ್‌.ಭೈರಪ್ಪ ಮತ್ತೊಮ್ಮೆ ವಿಮರ್ಶೆಗೊಳಗಾಗಿದ್ದಾರೆ. ಅವರ ಅಭಿಮಾನಿಗಳು ಇದನ್ನು ಟೀಕೆ ಅನ್ನಬಹುದೇನೋ. ಆದರೆ ಈ ಬಾರಿ ಮಾತನಾಡಿರುವುದು ಅತ್ಯಂತ ಸರಳ, ನೇರ ಮತ್ತು ಪ್ರಾಮಾಣಿಕ ಸಾಹಿತಿ ನಾ.ಡಿಸೋಜಾ. ಈ ಬಾರಿ ವಿಮರ್ಶಕರ ಮೇಲೆ ಯಾವ ಪೂರ್ವಗ್ರಹ ಅಥವಾ ಹಳೆಯ ದ್ವೇಷಗಳ ಗೂಬೆ ಕೂಡಿಸುವಂತಿಲ್ಲ.
ಭೈರಪ್ಪನವರು ಆಗಾಗ ಹೇಳುವ ಜೋಕ್‌ ಒಂದಿದೆ. ಅದು- “ನನ್ನ ಸಾಹಿತ್ಯ ಈತನಕ ಗಂಭೀರ ವಿಮರ್ಶೆಗೆ ಒಳಪಟ್ಟಿಲ್ಲ” ಅನ್ನೋದು. ಎಂಭತ್ತರ ದಶಕದಿಂದ ಮೊನ್ನೆತನಕ ವಿವಿಧ ವೇದಿಕೆಗಳಲ್ಲಿ, ವಿವಿಧ ಸ್ತರಗಳಲ್ಲಿ ಹಾಗೂ ವಿಭಿನ್ನ ಆಯಾಮಗಳಲ್ಲಿ ಭೈರಪ್ಪನವರ ಸಾಹಿತ್ಯ ವಿಮರ್ಶೆಗೆ ಒಳಪಟ್ಟಷ್ಟು ಬಹುಶಃ ಕನ್ನಡದ ಇನ್ಯಾವ ಬರಹಗಾರರದೂ ಒಳಪಟ್ಟಿಲ್ಲವೇನೋ! ಆದರೆ ಭೈರಪ್ಪ ಹೊಗಳಿಕೆಯನ್ನೆ ವಿಮರ್ಶೆ ಎಂದು ಭಾವಿಸಿರುವುದರಿಂದ ಅವರಿಗೆ ತಮ್ಮ ಬರಹಗಳ ಕುರಿತಾದ ಈ ಯಾವ ಚರ್ಚೆಗಳೂ ಗಂಭೀರ ವಿಮರ್ಶೆ ಅನ್ನಿಸಿರಲಿಕ್ಕಿಲ್ಲ.

ಸ್ವಾಸ್ಥ್ಯ ಕೆಡಿಸುವ ಅಭಿರುಚಿ
ಕನ್ನಡ ಕಾದಂಬರಿ ಲೋಕಕ್ಕೆ ಭೈರಪ್ಪನವರ ಕೊಡುಗೆ ನಗಣ್ಯವೇನಲ್ಲ. ಸಂಖ್ಯೆ ಮಾತ್ರವಲ್ಲ, ಓದಿನ ಒಂದು ರುಚಿಯನ್ನೂ ಅವರು ಸ್ಥಾಪಿಸಿರುವುದು ಹೌದು. ಆದರೆ ಆ ರುಚಿಯು ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಗಣನೀಯ ಕೊಡುಗೆಯನ್ನೇ ನೀಡಿದೆ. ಆರಂಭದ ಧರ್ಮಶ್ರೀ ಇಂದ ಹಿಡಿದು ಇತ್ತೀಚಿನ ಕವಲು ಕಾದಂಬರಿಯವರೆಗೆ ಅವರು ಜಾತಿ ಮತ್ತು ಹೆಣ್ಣನ್ನು ಬಳಸಿಕೊಂಡಿರುವ, ಬಿಂಬಿಸಿರುವ ಬಗೆ ನೋಡಿದರೆ ಸಂವೇದಶೀಲರ ಒಳಗು ಕುದಿಯುತ್ತದೆ. ಭೈರಪ್ಪನವರ ಜಾತಿ ರಾಜಕಾರಣ ಅವರ ’ದಾಟು’ವಿನ ಅನಂತರ ಜನ ಸಾಮಾನ್ಯರೆದುರು ತೆರೆದುಕೊಳ್ಳುತ್ತ ಹೋಯ್ತು. ಆದರೆ ಸೂಕ್ಷ್ಮಜ್ಞರು ಅದರ ಘಾಟನ್ನು ಅವರ ಮೊದಲ ಕಾದಂಬರಿಯಲ್ಲೇ ಗುರುತಿಸಿದ್ದರು. ಧರ್ಮಶ್ರೀಯಲ್ಲಿ ಕ್ರಿಶ್ಚಿಯನ್ ಹುಡುಗಿಯೊಬ್ಬಳ ರೀತಿ ನೀತಿಗಳು, ಆಕೆ ಹಿಂದೂವಾಗಿ ಮತಾಂತರಗೊಂಡ ನಂತರದ ಬದಲಾವಣೆ ಹಾಗೂ ಈ ಎಲ್ಲಕ್ಕೆ ಬೆಂಬಲವಾಗಿ ನಿಲ್ಲುವ ಸಂಘದ ಪ್ರಚಾರಕ – ಇವು ಕಾದಂಬರಿಯ ಕೇಂದ್ರ ವಸ್ತು. ಇವನ್ನಿಟ್ಟುಕೊಂಡು ಕಾದಂಬರಿ ಹೆಣೆಯುತ್ತ ಹೆಣ್ಣಿನ ಜಾತಿ, ವೇಷಭೂಷಣ ಮತ್ತು ನಡವಳಿಕೆಗಳಿಗೆ ಅಂತಸ್ಸಂಬಂಧ ಕಟ್ಟಿದ್ದ ಭೈರಪ್ಪನವರನ್ನು ತರಾಟೆಗೆಳೆದು ಬಹಳ ಹಿಂದೆಯೇ ಶಿವರಾಮ ಕಾಡನಕುಪ್ಪೆ ಲೇಖನವೊಂದನ್ನು ಬರೆದಿದ್ದರು.

ದ ಡಿಬೇಟರ‍್
ಅಪಾರ ಜನಮೆಚ್ಚುಗೆ ಪಡೆದು ಸಿನೆಮಾ ಆಗಿಯೂ ಜನಪ್ರಿಯಗೊಂಡಿದ್ದ ‘ವಂಶವೃಕ್ಷ’ ಕಾದಂಬರಿಯನ್ನು ಕೀರ್ತಿನಾಥ ಕುರ್ತಕೋಟಿ ‘ನೂರು ದೋಷಗಳಿರುವ ಕಾದಂಬರಿ’ ಎಂದುಬಿಟ್ಟಿದ್ದರು. ಅನಂತಮೂರ್ತಿ ಕೂಡ ವಂಶವೃಕ್ಷ ಒಂದು ನೆಲೆಯಲ್ಲಿ ಸಂಪ್ರದಾಯವಾದಿಗಳ ತಪ್ಪುಗಳನ್ನು ಕೆದಕುತ್ತದೆಯೇ ಹೊರತು ಅದಕ್ಕೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ ಎನ್ನುವ ಮೂಲಕ ಅದರ ದೋಷವನ್ನು ತೋರಿಸಿದ್ದರು. ಅನಂತಮೂರ್ತಿಯವರು ಭೈರಪ್ಪನವರನ್ನು ’ಡಿಬೇಟರ‍್’ ಅಂತ ಕರೆಯುತ್ತಾರೆ. ‘ಭೈರಪ್ಪ ನನ್ನ ಜತೆಯ ಬರೆಹಗಾರ. ಆದರೆ ನನಗೆ ಸಾಹಿತ್ಯ ಲೋಕದಲ್ಲಿ ಮುಖ್ಯ ಅನ್ನಿಸಿದವರು ಅವರಲ್ಲ. ಅವರೆಷ್ಟೇ ಜನಪ್ರಿಯ ಆಗಿರಲಿ, ಅವರೊಬ್ಬರು ಡಿಬೇಟರ್. ಜನರ ಮೆಚ್ಚುಗೆಗೆ ಬರುವ ಹಾಗೆಯೇ ಅವರು ಕಾದಂಬರಿಗಳನ್ನು ಬರೆಯುವುದು.’ ಎಂದು ನೇರವಾಗಿಯೇ ಹೆಳಿದ್ದರು ಅನಂತಮೂರ್ತಿ. ಇದು ಆವರಣ ಕಾದಂಬರಿಯನ್ನು ಪ್ರತಿಭಟಿಸಿ ‘ಆವರಣ -ಅನಾವರಣ’ ಕೃತಿ ಬಿಡುಗೊಂಡ ಸಂದರ್ಭದಲ್ಲಿ ಅವರಾಡಿದ ಮಾತುಗಳು. ಕಾಸರವಳ್ಳಿಯವರ ‘ನಾಯಿ ನೆರಳು’ ಸಿನೆಮಾ ನೋಡಿದ  ಸಂದರ್ಭದಲ್ಲಿ ‘ಭೈರಪ್ಪ ರಾಹುಗ್ರಸ್ಥ ಲೇಖಕ. ಆದರೂ ಅವರ ಕೃತಿಗಳಿಗೆ ಮೌಲಿಕ ರೂಪ ನೀಡಿ ಅವರನ್ನು ರಾಹುವಿನಿಂದ ಬಿಡುಗಡೆಗೊಳಿಸುವ ಕೆಲಸವನ್ನು ಗಿರೀಶ್ ಕಾಸರವಳ್ಳಿ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು ಅನಂತಮೂರ್ತಿ.

ಮರಣೋತ್ತರ ನೀಡಬಹುದಿತ್ತು!
ಸಾಹಿತಿಗಳು ಮಾತ್ರವಲ್ಲ, ನಿಡುಮಾಮಿಡಿ ಸ್ವಾಮೀಜಿಯವರ ಮಾತಿನ ಪ್ರಹಾರಕ್ಕೂ ಭೈರಪ್ಪ ಸಿಲುಕಿದ್ದುಂಟು. ಅದು ಚಂದ್ರಶೇಖರ ಕಂಬಾರರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದ್ದಕ್ಕಾಗಿ ಏರ್ಪಾಟಾಗಿದ್ದ ಅಭಿನಂದನಾ ಸಮಾರಂಭ. ಭೈರಪ್ಪನವರ ಅಂಧಾಭಿಮಾನಿಗಳು ಈ ಸಾರ್ತಿ ಎಸ್‌ಎಲ್‌ಬಿಗೇ ಪ್ರಶಸ್ತಿ ಬರಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರೊಬ್ಬರು ಭೈರಪ್ಪನವರ ಬಗ್ಗೆ ಮಾತಾಡುತ್ತಾ ‘ಅವರೊಬ್ಬ ಭೋಗಸ್ ಸಾಹಿತಿ’ ಅಂದಿದ್ದು, ಅದನ್ನು ಅನುಮೋದಿಸಿ ಮಾತಾಡಿದ ನಿಡುಮಾಮಿಡಿ ಸ್ವಾಮೀಜಿಗಳು ‘ಅವರಿಗೆ ಬೇಕಿದ್ದರೆ ಮರಣೋತ್ತರ ಪ್ರಶಸ್ತಿ ನೀಡಬಹುದು’ ಅಂದಿದ್ದೆಲ್ಲವೂ ದೊಡ್ಡ ಸುದ್ದಿಯಾಗಿತ್ತು.
ಇದೀಗ ನಾ.ಡಿಸೋಜಾ ‘ಎಸ್‌.ಎಲ್‌.ಭೈರಪ್ಪ ಅವರು ಉತ್ತಮ ಲೇಖಕರಲ್ಲ. ಹಳೆಯದನ್ನ ಕೆದಕಿ ಬರೆಯುವ ಸಾಹಿತಿ ಎಸ್.ಎಲ್. ಭೈರಪ್ಪ ಅವರು ನನ್ನ ಪಾಲಿಗೆ ಶ್ರೇಷ್ಠ ಲೇಖಕರಲ್ಲ. ಹಳೇ ಗಾಯವನ್ನು ಕೆದಕುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳುವ ಮೂಲಕ ಮತ್ತೊಮ್ಮೆ ಭೈರಪ್ಪನವರನ್ನು ವಿಮರ್ಶೆಗೆ ಒಳಪಡಿಸಿದ್ದಾರೆ. ‘ಎಸ್‌.ಎಲ್‌.ಭೈರಪ್ಪ ಅವರ ಕವಲು ಮತ್ತು ಆವರಣ ಕಾದಂಬರಿಗಳು ಮೇಲ್ನೋಟಕ್ಕೆ ವೈಚಾರಿಕತೆಯ ಸೋಗು ಹಾಕಿಕೊಂಡು, ಒಳಗಡೆ ಹಳೆಯ ದ್ವೇಷವನ್ನು ಕೆದಕುವಂತಿವೆ’ ಅನ್ನುವುದು ನಾ.ಡಿಸೋಜಾ ಎತ್ತಿ ತೋರಿಸಿದ ಅಂಶ.

ಕೃತಘ್ನ, ಸಂವೇದನಾ ಹೀನ…
ಬಹುಶಃ ಕನ್ನಡ ಸಾಹಿತಿಗಳಲ್ಲಿ ಭೈರಪ್ಪ ವಿವಿಧ ವರ್ಗಗಳಿಂದ ಬೈಸಿಕೊಂಡಷ್ಟು ಇನ್ಯಾರೂ ಬೈಸಿಕೊಂಡಿಲ್ಲ. ಆವರಣ ಬರೆದ ನಂತರವಂತೂ ಇದು ಬಹುತೇಕ ಎಲ್ಲ ವರ್ಗಗಳನ್ನು ವ್ಯಾಪಿಸಿದೆ. ತಾವು ಬಲಪಂಥೀಯ ಇತಿಹಾಸವನ್ನು ಓದುವಾಗ ಹಾಕಿಕೊಂಡ ಅಡಿಟಿಪ್ಪಣಿಗಳನ್ನೇ ಜೋಡಿಸಿ ಒಂದು ಪುಸ್ತಕ ಬರೆದು, ಅದಕ್ಕೆ ‘ಆವರಣ’ ಎಂದು ಹೆಸರಿಟ್ಟು ಅದನ್ನು ಕಾದಂಬರಿ ಎಂದು ಕರೆದಾಗಲೇ ಭೈರಪ್ಪನವರ ಬಗ್ಗೆ ಅಳಿದುಳಿದಿದ್ದ ಗೌರವ ಕುಸಿದುಬಿದ್ದಿತ್ತು. ನೇರವಾಗಿ ಕೋಮು ಸೌಹಾರ್ದದ ಗೂಡಿಗೆ ಎಸೆದ ಕಿಡಿಗೇಡಿಯ ಕಲ್ಲಿನಂತಿದೆ ಆ ಕೃತಿ. ಅದಕ್ಕೂ ಮುಂಚೆ ಬರೆದಿದ್ದ ಮಂದ್ರವನ್ನು ಅದ್ಯಾವ ಭಾವದಲ್ಲಿ ಓದಿಕೊಳ್ಳಬೇಕು ಅನ್ನೋದೇ ತಿಳಿಯದಾಗಿತ್ತು. ಅತಾರ್ಕಿಕ ಹಾದರದ ಹೆಣಿಗೆ ಕಾದಂಬರಿಯ ವಸ್ತುವಾದರೆ ಅದು ಹೇಗಿರಬಹುದು ಅನ್ನೋದಕ್ಕೆ ಮಂದ್ರ ಒಳ್ಳೆಯ ಉದಾಹರಣೆ. ಈ ಕಾದಂಬರಿಗಾಗಿ ಭೈರಪ್ಪ ಹಿಂದೂಸ್ಥಾನಿ ಸಂಗೀತವನ್ನೆಲ್ಲ ಅಭ್ಯಾಸ ಮಾಡಿ ಪರಿಶ್ರಮ ಹಾಕಿದ್ದರು. ಆದರೆ ಈ ಪರಿಶ್ರಮವೆಲ್ಲ ಮುರಿಯುವಿಕೆಗೆ ಪೋಲಾಯಿತೇ ವಿನಃ ಕಟ್ಟುವಿಕೆಗೆ ಪೂರಕವಾಗಲಿಲ್ಲ.
ಕವಲು ಕಾದಂಬರಿಯಲ್ಲಂತೂ ಭೈರಪ್ಪ ನೇರವಾಗಿ ಹೆಣ್ಣುಮಕ್ಕಳ ಕರುಳಿಗೆ ಕಿಚ್ಚಿಟ್ಟಿದ್ದರು. ಹೋರಾಟದ ದನಿಯನ್ನು ದಮನಗೊಳಿಸುವ ವಿಚಿತ್ರ ಹುಂಬತನ ಆ ಕಾದಂಬರಿಯ ವಸ್ತಿವಿನಲ್ಲಿತ್ತು. ಪದೇ ಪದೇ ‘ಅಗಲ ಬೊಟ್ಟು ಇಟ್ಟುಕೊಳ್ಳುವ’ ಹೆಂಗಸನ್ನ ದೇವಿಯೆಂದೂ ಗಿಡ್ಡ ಕೂದಲಿನ ಸಾಮಾಜಿಕ ಬದುಕಿನಲ್ಲಿರುವ ಹೆಣ್ಣುಗಳನ್ನ ದೆವ್ವಗಳಂತೆಯೂ ಬಿಂಬಿಸಿದ ಈ ಕಾದಂಬರಿ ಭೈರಪ್ಪನ ವಿಕೃತ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು.
ಇಷ್ಟೆಲ್ಲ ಮಾಡಿಯೂ ತಮ್ಮನ್ನು ಸಹಿಸಿಕೊಂಡಿರುವ ಕನ್ನಡಿಗರ ಬಗ್ಗೆ ಭೈರಪ್ಪನವರಿಗೆ ಅಂಥಾ ಪ್ರೀತಿಯೇನಿಲ್ಲ. ಮೈಸೂರಿನ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭೈರಪ್ಪ ‘ಕನ್ನಡಿಗರು ತರ್ಲೆಗಳು’ ಅಂದು ಕೆಂಗಣ್ಣಿಗೆ ಗುರಿಯಾಗಿದ್ದರು. ಮತಾಂತರದ ಕುರಿತು ಮಾತಾಡುವಾಗೆಲ್ಲ ಸೋನಿಯಾರನ್ನು ದೂರುತ್ತ ಕಾಂಗ್ರೆಸ್ಸಿಗರ ಮುನಿಸನ್ನೂ ಮೈಮೇಲೆಳೆದುಕೊಂಡರು. ತಮಗೆ ಜ್ಞಾನಪೀಠ ಸಿಗದಾದಾಗ ಸಾಹಿತ್ಯ ಕ್ಷೇತ್ರದ ಲಾಬಿಗಳ ವಿರುದ್ಧವೂ ಬ್ರಾಹ್ಮಣ ವಿರೋಧಿಗಳ ಬಗೆಗೂ ಮಾತಡಿದರು. ಕೊನೆಗೂ ಸರಸ್ವತಿ ಸಮ್ಮಾನ ಸಿಕ್ಕಾಗ ಅದು ಹಿಂದೆ ಎಷ್ಟು ಬಾರಿ ತಪ್ಪಿತ್ತು, ಯಾರೆಲ್ಲ ತಪ್ಪಿಸಿದ್ದರು ಅನ್ನುವ ಲೆಕ್ಕ ಕೊಟ್ಟರು.
ಇಷ್ಟೆಲ್ಲ ಮಾತನಾಡುವ ಭೈರಪ್ಪ ಯಾವತ್ತೂ ನಾಡು ನುಡಿಗಳ ಬಗ್ಗೆ ಕಾಳಜಿಯ ಮಾತುಗಳನ್ನಾಡಿಲ್ಲ. ಜನಪರವಾದ, ಪಕ್ಷಾತೀತವಾದ ಒಂದೇ ಒಂದು ಹೇಳಿಕೆ ಅವರ ಭಾಷಣಗಳಲ್ಲಾಗಲೀ ಬರಹಗಳಲ್ಲಾಗಲೀ ಕಂಡುಬಂದಿಲ್ಲ. ಮತಾಂತರ, ಚಾರಿತ್ರಿಕ ಮುಸ್ಲಿಮ್‌ ದುರಾಚಾರಗಳಿಗೆ ಅವರು ಮಮ್ಮಲ ಮರುಗುವಷ್ಟು ಕಣ್ಣೆದುರಿನ ಅಸ್ಪೃಷ್ಯತೆಗೆ, ಹೆಣ್ಣಿನ ಮೇಲಾಗುತ್ತಿರುವ ಶೋಷಣೆಗೆ ಮರುಗಿಲ್ಲ. ಭಾಷೆಯ ವಿಷಯ ಬಂದಾಗಲೂ ಅಷ್ಟೇ. ಇಂಥಾ ಕೃತಘ್ನ, ಸಂವೇದನಾಹೀನ ಬರಹಗಾರನಿಗೆ ಇರುವ ಅಭಿಮಾನಿಗಳ ಸಂಖ್ಯೆ ನಿಜಕ್ಕೂ ಆತಂಕ ಹುಟ್ಟಿಸುತ್ತದೆ. ಅವರನ್ನು ಮೆಚ್ಚಿ ಮೆರೆಸುತ್ತಿರುವ ವರ್ಗ ಯಾವುದು ಎಂದು ಗಮನಿಸಿದರೆ ಅದರ ಹುನ್ನಾರಗಳೂ ಅದಕ್ಕೆ ಪೂರಕವಾಗಿ ಭೈರಪ್ಪನ ನಡೆಗಳಿರುವುದೂ ಸ್ಪಷ್ಟವಾಗಿಹೋಗುತ್ತವೆ.

*******************
ಭೈರಪ್ಪನ್ನೇ ಬೈಯೋದ್ಯಾಕೆ?
ಕನ್ನಡ ಸಾಹಿತ್ಯ ಲೋಕದಲ್ಲಿ ಭೈರಪ್ಪನವರಷ್ಟು ಬೈಸಿಕೊಂಡವರಿಲ್ಲವೇನೋ. ಭೈರಪ್ಪ ಕೋಮು ದಳ್ಳುರಿಯ, ಹೆಣ್ಣನ್ನು ಹೀನವಾಗಿ ನೋಡುತ್ತ ಅವಳನ್ನು ಸಂಪ್ರದಾಯದ ಸಂಕೋಲೆಯಲ್ಲಿ ಕಟ್ಟಿಹಾಕುವಂತಹ ಸಾಹಿತ್ಯ ರಚಿಸುತ್ತಾರೆ ಅನ್ನೋದು ಅವರ ಮೇಲಿನ ಆಪಾದನೆ. ಈ ಬಗೆಯ ಕೃತಿಗಳನ್ನು ಬಲಪಂಥೀಯ ಸಂಘಟನೆಗಳು ಸಾಕಷ್ಟು ಸೃಷ್ಟಿಸಿವೆ, ಸೃಷ್ಟಿಸುತ್ತಿವೆ. ಆದರೆ ಭೈರಪ್ಪನೇ ಯಾಕೆ ಬಾಯಿಗೆ ತುತ್ತಾಗುತ್ತಿದ್ದಾರೆ? ಇದಕ್ಕೆ ಕಾರಣ ಇಲ್ಲದಿಲ್ಲ. ಭೈರಪ್ಪ ಈ ವಿಚ್ಛಿದ್ರಕಾರಿ ಕೆಲಸವನ್ನು ಸಾಹಿತ್ಯದ ಹೆಸರಲ್ಲಿ ಮಾಡುತ್ತಿದ್ದಾರೆ. ಇವರ ಈ ವಿಕೃತಿ ನೇರ ತೋರಿಕೆಯದ್ದಲ್ಲ. ಕಾದಂಬರಿಯ ಹೊದ್ದಿಕೆಯಲ್ಲಿ ದ್ವೇಷದ ವಿಷ ಬೀಜಗಳನ್ನು ನೆಡುತ್ತಿದ್ದಾರೆ. ಬರಹದ ಮಟ್ಟಿಗೆ ಉತ್ತಮ ಭಾಷೆ ಹಾಗೂ ನಿರೂಪಣಾ ತಂತ್ರವನ್ನು ಬಳಸುವ ಭೈರಪ್ಪ, ಅವನ್ನು ತಮ್ಮ ಈ ಹಿಡನ್‌ ಅಜೆಂಡಾಗಾಗಿ ದುಡಿಸಿಕೊಳ್ಳುತ್ತಿದ್ದಾರೆ. ಹಾಗೆಂದೇ ಭೈರಪ್ಪ ಈತನಕ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚರ್ಚಾಗೋಷ್ಟಿಗಳಲ್ಲಿ ಒಳಗೊಂಡಿಲ್ಲ. ಅವರ ಕೃತಿಗಳು ಹೆಚ್ಚು ಚರ್ಚೆಯಾಗಿರುವುದು ಅವುಗಳ ದುಷ್ಪರಿಣಾಮದ ನೆಲೆಯಲ್ಲಿಯೇ.

ಅನಧಿಕೃತ ವಕ್ತಾರಿಕೆ
ಸಂಘ ಪರಿವಾರ ಬಹಳ ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸುವ ಅತ್ಯಂತ ಶಿಸ್ತುಬದ್ಧ ಸಂಸ್ಥೆ. ಇಲ್ಲಿನ ಪ್ರಚಾರಕರು ಹತ್ತು ಹಲವು ಕ್ಷೇತ್ರಗಳಲ್ಲಿ ಜನರ ಕಣ್ಣಿಗೆ ನೇರವಾಗಿ ಕಾಣದಂತೆ ಚದುರಿಕೊಂಡಿರುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಾರಾಯಣ ಮೂರ್ತಿ, ಸಂಶೋಧನಾ ಕ್ಷೇತ್ರದಲ್ಲಿ ಚಿದಾನಂದ ಮೂರ್ತಿ ಇದ್ದಂತೆ ಸಾಹಿತ್ಯ ಕ್ಷೇತ್ರದಲ್ಲಿ ಭೈರಪ್ಪ ಸಂಘಿಗಳ ಅನಧಿಕೃತ ವಕ್ತಾರಿಕೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬಲಪಂಥೀಯ ವಾದವು ಸಾರುವ ವರ್ಣಾಶ್ರಮ ಧರ್ಮದ ಬೆಂಬಲ, ಬ್ರಾಹ್ಮಣ್ಯದ ಮೇಲ್ಮೆ, ಸ್ತ್ರೀಯರ ಸ್ವಾತಂತ್ರ‍್ಯ ಹರಣ ಮತ್ತು ಅವರು ಹೇಗಿರಬೇಕೆಂಬ ನಿರ್ದೇಶನ – ಇವಿಷ್ಟನ್ನು ಸೂಚ್ಯವಾಗಿ ಹರಡುವ ಜವಾಬ್ದಾರಿ ಭೈರಪ್ಪನವರ ಪಾಲಿಗಿದೆ. ಅವರು ತಮ್ಮ ಬರಹ ಕೌಶಲ್ಯದ ಮೂಲಕ ಅದನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಅವರ ಯಾವುದೇ ಕಾದಂಬರಿ ಬಿಡುಗಡೆಯಾದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕೊಂಡು ಸಭೆ ಸಮಾರಂಭಗಳಲ್ಲಿ ಹಂಚುವ ಕೆಲಸವನ್ನು ಕಾರ್ಯಕರ್ತರು ಶ್ರದ್ಧೆಯಿಂದ ಮಾಡುತ್ತಾರೆ. – ಎನ್ನುವಲ್ಲಿಗೆ ಭೈರಪ್ಪನವರ ಪುಸ್ತಕಗಳ ಮುದ್ರಣ ಸಂಖ್ಯೆಯಲ್ಲೂ ಏರಿಕೆಯಾಯ್ತ; ಟೀಆರ್‌ಪಿ ಆಧರಿಸಿ ಜನಪ್ರಿಯತೆ ನಿರ್ಧರಿಸುವಂತೆ ಅವರು ಜನಪ್ರಿಯರೂ ಆದರು; ಅವರ ಬರಹಗಳ ಮೂಲಕ ಬಲಪಂಥೀಯರು ತಮ್ಮ ಬೆಳೆಯನ್ನೂ ಬೇಯಿಸಿಕೊಂಡರು. ಈ ಸರಳ ಸೂತ್ರ ಕಣ್ಣಿಗೆ ರಾಚುತ್ತಿರುವುದರಿಂದಲೇ ಅವರ ವಿರುದ್ಧ ಇಷ್ಟೊಂದು ತಕರಾರುಗಳು ಎದ್ದಿರುವುದು.

‘ಭೈ’ ಬೆಂಬಲಿಗರು
ಕಂಬಾರರಿಗೆ ಜ್ಞಾನ ಪೀಠ ಘೋಷಣೆಯಾದಾಗ ಯಾವ ಕಾರಣಕ್ಕೋ ವಿಪರೀತ ರೇಗಿಕೊಂಡ ಪಾಟೀಲಪುಟ್ಟಪ್ಪ ಈ ಪ್ರಶಸ್ತಿಗೆ ಕಂಬರ ತೀರಾ ಅನರ್ಹ. ಭೈರಪ್ಪನವರಿಗೆ ಸಿಗಬೇಕಾಗಿದ್ದು ರಾಜಕೀಯ ನಡೆದು ಕಂಬಾರರ ಪಾಲಾಗಿದೆ ಎಂದು ಕಾರಿಕೊಂಡಿದ್ದರು. ಇತ್ತೀಚೆಗೆ ನಾ.ಡಿಸೋಜ ಭೈರಪ್ಪ ಶ್ರೆಷ್ಠ ಲೇಖಕರೇನಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಾ ಮತ್ತೊಂದು ಸಭೆಯಲ್ಲಿ ಮಾ.ಹಿರಣ್ಣಯ್ಯ ದೊಡ್ಡ ದನಿಯಲ್ಲಿ ಪ್ರತಿಭಟಿಸಿದ್ದರು. ಡಿಸೋಜರಿಗೆ ವೃತ್ತಿ ಮತ್ಸರ. ಭೈರಪ್ಪ ಬರೆಯುವುದರಿಂದ ಡಿಸೋಜಾ ತಿನ್ನುವ ಅನ್ನಕ್ಕೇನು ಕಲ್ಲು ಬಿದ್ದಿದೆಯೇ ಎಂದು ಕೂಗಾಡಿದ್ದರು. ಫೇಸ್‌ಬುಕ್‌ ಜಾಲತಾಣದಲ್ಲಿ ‘ಭೈ’ ಬೆಂಬಲಿಗರು ತಮ್ಮ ಅಸಲಿಯತ್ತು ಏನೆಂಬುದನ್ನು ತಮ್ಮ ಭಾಷಾ ಪ್ರಯೋಗದಿಂದಲೂ ಚಿಂತನೆಗಳನ್ನು ಬಹಿರಂಗಗೊಳಿಸುವುದರಿಂದಲೂ ಖುಲ್ಲಂಖುಲ್ಲಾ ತೋಡಿಕೊಂಡಿದ್ದರು. ೈ

ನಿಮಗೆ ಗೊತ್ತಿರಲೂಬಹುದಾದ್ದು…
* ಭೈರಪ್ಪನವರ ಮೊದಲ ಕಾದಂಬರಿ ಧರ್ಮಶ್ರೀ. ಅದು ಪ್ರಕಟವಾದ ಕಾಲಕ್ಕೇ ಅಂದಿನ ತರುಣ ಸಂವೇದನಾಶೀಲ ಲೇಖಕರು ಅದನ್ನು ಖಂಡಿಸಿದ್ದರು. ಈ ಕಾದಂಬರಿ ಕುರಿತು ಶಿವರಾಮ ಕಾಡನಕುಪ್ಪೆ ಒಂದು ಲೇಖನವನ್ನೂ ಬರೆದಿದ್ದರು.
* ವಂಶವೃಕ್ಷ ನೂರು ದೋಷಗಳಿರುವ ಕಾದಂಬರಿ ಎಂದಿದ್ದರು ಕೀರ್ತಿನಾಥ ಕುರ್ತಕೋಟಿ.
* ದಾಟು ಕಾದಂಬರಿ ಪ್ರಕಟವಾದಾಗ ದಲಿತ ಸಮುದಾಯದ ತೀವ್ರ ಪ್ರತಿರೋಧ ಎದುರಿಸಿದರು ಭೈರಪ್ಪ.
* ಮಂದ್ರ ಕಾದಂಬರಿ ಮೆಚ್ಚುಗೆ ಪಡೆದಷ್ಟೇ ತೆಗಳಿಕೆಯನ್ನೂ ಪಡೆದಿತ್ತು.
* ಆವರಣ ಮತ್ತು ಕವಲು ಕಾದಂಬರಿಗಳು ತಮ್ಮ ಉದ್ದೇಶವನ್ನು ನೇರವಾಗಿಯೇ ತೋರ್ಪಡಿಸಿಕೊಂಡವು. ನಾಡಿನ ಎಲ್ಲ ಪ್ರಜ್ಞಾವಂತರು ಈ ಎರಡು ಕೃತಿಗಳನ್ನು ಕಟುವಾಗಿ ಟೀಕಿಸಿದ್ದರು

ಬಾಬಾ, ಇನ್ನೂ ಬಾಗಿಲಲ್ಲೇ ನಿಂತಿದ್ದೇವೆ ನಾವು….

ನೀನಂದು ತೆರೆಸಿದ
ಗುಡಿಗೋಪುರಗಳ
ಬಾಗಿಲಲ್ಲೇ ನಿಂತಿದ್ದೇವೆ ನಾವು….

ಪಂಚಭೂತಗಳ -ಗಾಳಿ,ನೀರು
ಮಣ್ಣು,ಆಕಾಶಗಳ ಹಕ್ಕು ಹಂಚಿದವನು
ನೀನು…

ನಮ್ಮ ಬದುಕುಗಳನು ಬೆಳಕಿಂದ
ಕೆತ್ತಿದ ಶಿಲ್ಪಿಯೇ
ನಿನಗೆ ಮುಗಿದ ಕೈಗಳನು
ಇನ್ನಾವ ಶಿಲೆಯೆದುರೂ
ನಾವು ಜೋಡಿಸಲಾರೆವು…

ಭಗವದ್ಗೀತೆ , ಕುರಾನು, ಬೈಬಲ್ಲುಗಳ
ತಬ್ಬಿದವರು, ತಳ್ಳಿದವರ
ತಲೆ ಮೇಲಿರೋದು
ನೀ ನಮಗಾಗಿ ಬರೆದಿಟ್ಟ
ಸಂವಿಧಾನವೆಂಬ ದಮ್ಮ ಗ್ರಂಥ….

ಲೋಕಕೆ ಸೂತಕವಾದ
ನಮ್ಮ ಕೇರಿಗಳಲಿ ನೀ ಹಚ್ಚಿದ
ಒಂದೊಂದು ದೀಪವೂ
ಸೂರ್ಯಪರ್ಯಾಯ….

ಅವತಾರ ಪುರುಷರೆಲ್ಲ ಕೊಟ್ಟಿದ್ದು
ಪಂಚಭೂತಗಳ ಪೂಜೆ ಮತ್ತು
ಪಾಲಿಸಲೊಂದು ಗ್ರಂಥ……
ಅಷ್ಟೇ ತಾನೆ…?

ನೀ ಬಿತ್ತಿದ ಮನುಷ್ಯತ್ವದ ಬೀಜಗಳೆಲ್ಲ
ಇಂದು ಶಾಶ್ವತ ನೆರಳಿನ ಸಾಲುಮರಗಳಾಗಿವೆ..

ನಿನ್ನ ದಾರಿಯ ಮಂಡೇಲರೆಲ್ಲ ಮಾಯವಾಗುತ್ತಿರುವ
ಈ ಹೊತ್ತಲ್ಲಿ,
ನಮ್ಮೆಲ್ಲರ ಕಣ್ಣೀರೆಲ್ಲ ಅಂದಿನಿಂದಿಲೂ
ನಿನ್ನ ಕಿವಿಯಲ್ಲಿ ಪಿಸುಗುಡುವ ದನಿ
ಮತ್ತೆ ಕೇಳುತಿದೆ…

“ಬಾಬಾ ನಿನ್ನ ಹಾಗೆ ಇಲ್ಲಿ
ಯಾರೂ ಇಲ್ಲ….”